ಟೀಂ ಇಂಡಿಯಾದ ಭರವಸೆಯ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಹೊಸ ಇತಿಹಾಸವನ್ನೇ ಸೃಷ್ಟಿಸಿದ್ದಾರೆ. ಕ್ಯಾಲೆಂಡರ್ ವರ್ಷದಲ್ಲಿ ಟಿ-20 ಕ್ರಿಕೆಟ್‌ನಲ್ಲಿ 1000 ರನ್ ಪೂರೈಸಿದ ಮೊದಲ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ. ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ನಲ್ಲಿ ಸೂರ್ಯಕುಮಾರ್ ಈ ಸಾಧನೆ ಮಾಡಿದ್ದಾರೆ.
ಟೀಮ್ ಇಂಡಿಯಾದ ಅಂತಿಮ ಸೂಪರ್ 12 ಪಂದ್ಯದಲ್ಲಿ 32ರ ಹರೆಯದ ಸೂರ್ಯಕುಮಾರ್ ಜಿಂಬಾಬ್ವೆ ವಿರುದ್ಧ ಉತ್ತಮ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ಹೊಸ ಮೈಲಿಗಲ್ಲನ್ನು ಸಾಧಿಸಿದರು. ಇದು 2022ರಲ್ಲಿ ಸೂರ್ಯಕುಮಾರ್ ಆಡಿದ 28ನೇ ಟಿ20 ಪಂದ್ಯ. ಈ ಕ್ಯಾಲೆಂಡರ್ ವರ್ಷದಲ್ಲಿ ಅವರು 1000ಕ್ಕಿಂತ ಅಧಿಕ ರನ್ ಗಳಿಸಿದ್ದಾರೆ. ಈ ಸಾಧನೆ ಮಾಡಿದ ವಿಶ್ವದ ಎರಡನೆಯ ಆಟಗಾರನೂ ಹೌದು. ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್ ಮೊದಲ ಸ್ಥಾನದಲ್ಲಿದ್ದಾರೆ.
ಈ ವರ್ಷ 23 ಟಿ20 ಪಂದ್ಯಗಳನ್ನಾಡಿ 924 ರನ್ ಗಳಿಸಿರುವ ರಿಜ್ವಾನ್, 2021ರಲ್ಲಿ 29 ಪಂದ್ಯಗಳಿಂದ ಒಟ್ಟು 1326 ರನ್ ಕಲೆಹಾಕಿದ್ದಾರೆ. ಇವತ್ತು ನಡೆದ ಜಿಂಬಾಬ್ವೆ ವಿರುದ್ಧದ ಮ್ಯಾಚ್‌ನಲ್ಲಿ ಸೂರ್ಯಕುಮಾರ್, ಕೇವಲ 25 ಎಸೆತಗಳಲ್ಲಿ ಆರು ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳ ಸಹಾಯದಿಂದ ಅಜೇಯ 61 ರನ್ ಗಳಿಸಿದರು. ಈ ವರ್ಷದ ಟಿ20 ವಿಶ್ವಕಪ್‌ನ ಐದು ಪಂದ್ಯಗಳಲ್ಲಿ ಇದು ಅವರ ಮೂರನೇ ಅರ್ಧಶತಕ.
ಈ ವರ್ಷ 28 ಟಿಟ್ವೆಂಟಿ ಪಂದ್ಯಗಳಲ್ಲಿ ಒಟ್ಟು 1026 ರನ್‌ಗಳನ್ನು ಸೂರ್ಯ ಬಾರಿಸಿದ್ದಾರೆ. ಅವರ ಬ್ಯಾಟಿಂಗ್ ಸರಾಸರಿ 44.60 ಮತ್ತು ಸ್ಟ್ರೈಕ್ ರೇಟ್ 186.54ರಷ್ಟಿದೆ. ಈ ವರ್ಷ ಇದುವರೆಗೆ 59 ಸಿಕ್ಸರ್ ಮತ್ತು 93 ಬೌಂಡರಿಗಳನ್ನು ಹೊಡೆದಿದ್ದಾರೆ. ಈ ವರ್ಷ ವಿಶಿಷ್ಟವಾದ ಆರು ದಾಖಲೆಗಳನ್ನು ಮಾಡಿರೋದು ಮತ್ತೊಂದು ಸಾಧನೆ.
ಈ ಅದ್ಭುತ ಪ್ರದರ್ಶನದಿಂದಾಗಿ ಸದ್ಯ ಸೂರ್ಯಕುಮಾರ್, ಟಿ20ಯಲ್ಲಿ ವಿಶ್ವದ ನಂಬರ್ ವನ್ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಸೂರ್ಯಕುಮಾರ್ ಕಳೆದ ವರ್ಷ ಮಾರ್ಚ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಟಿ20ಗೆ ಪಾದಾರ್ಪಣೆ ಮಾಡಿದರು, ಈವರೆಗೆ ಒಟ್ಟು 39 ಪಂದ್ಯಗಳನ್ನು ಆಡಿದ್ದು, 1270 ರನ್ ಗಳಿಸಿದ್ದಾರೆ.