ಸುಂದರವಾದ ಗಿಳಿ ಮಾಡಿರೋ ತುಂಟ ಕೆಲಸವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಲೈವ್‌ನಲ್ಲಿದ್ದ ವರದಿಗಾರನ ಭುಜದ ಮೇಲೆ ಕುಳಿತ ಗಿಳಿ ಆತನ ಇಯರ್ ಫೋನ್ ಕಚ್ಚಿಕೊಂಡು ಹಾರಿ ಹೋಗಿದೆ. ಈ ವಿಡಿಯೋ ನೇರಪ್ರಸಾರವಾಗಿದ್ದು, ಇಂಟರ್ನೆಟ್‌ನಲ್ಲಿ ಹರಿದಾಡ್ತಾ ಇದೆ.
ಪತ್ರಕರ್ತ ನಿಕೋಲಸ್ ಕ್ರುಮ್ ದರೋಡೆ ಪ್ರಕರಣಗಳಲ್ಲಾಗುತ್ತಿರುವ ಹೆಚ್ಚಳದ ಬಗ್ಗೆ ವರದಿ ನೀಡುತ್ತಿದ್ದ. ಚಿಲಿವಿಷನ್ ಚಾನೆಲ್‌ನಲ್ಲಿ ಇದು ನೇರಪ್ರಸಾರವಾಗುತ್ತಿತ್ತು. ಕಳ್ಳತನ ಮತ್ತು ದರೋಡೆ ಬಗ್ಗೆ ಆತ ಮಾತನಾಡುತ್ತಿರುವಾಗ್ಲೇ ಅವನ ಬಳಿಗೆ ಹಾರಿ ಬಂದ ಗಿಳಿ ಭುಜದ ಮೇಲೆ ಕುಳಿತಿದೆ. ನಂತರ ತನ್ನ ಕೊಕ್ಕಿನಿಂದ ಚುಚ್ಚಿ ಆತನ ಕಿವಿಯಲ್ಲಿದ್ದ ಇಯರ್ ಫೋನ್ ಹೊರತೆಗೆದಿದೆ. ಅದನ್ನು ಕಚ್ಚಿಕೊಂಡ ಗಿಳಿ ಅಲ್ಲಿಂದ ಹಾರಿ ಹೋಗಿದೆ.
ತುಂಟ ಗಿಳಿಯಿಂದಾದ ಅಡಚಣೆಯ ನಡುವೆಯೂ ಕ್ರೂಮ್ ತನ್ನ ವರದಿಯನ್ನು ಮುಂದುವರೆಸಿದ್ದಾನೆ. ಅಷ್ಟೇ ಅಲ್ಲ ಇಯರ್‌ಫೋನ್ ಅನ್ನು ಗಿಳಿಯಿಂದ ಕಸಿದುಕೊಂಡು ಬರುವಂತೆ ಕ್ಯಾಮರಾಮೆನ್‌ಗೆ ವರದಿಗಾರ ಸಿಗ್ನಲ್ ಕೂಡ ಕೊಟ್ಟಿದ್ದಾನೆ. ಗಿಳಿ ಅಂತಿಮವಾಗಿ ಇಯರ್‌ಫೋನ್ ಅನ್ನು ಸ್ವಲ್ಪ ದೂರದಲ್ಲಿ ಬೀಳಿಸಿತು, ಅದನ್ನು ಸಿಬ್ಬಂದಿ ಹೆಕ್ಕಿ ತಂದಿದ್ದಾರೆ.
ಈ ವರ್ಷದ ಆರಂಭದಲ್ಲಿ ಇದೇ ರೀತಿಯ ಘಟನೆ ರಷ್ಯಾದಲ್ಲಿ ನಡೆದಿತ್ತು. ಹವಾಮಾನ ವರದಿಗಾರನ ಲೈವ್ ಸಂದರ್ಭದಲ್ಲಿ ನಾಯಿಯೊಂದು ಮೈಕ್ರೋಫೋನ್ ಕದ್ದುಕೊಂಡು ಓಡಿಹೋಗಿತ್ತು. ಮಿರ್ ಟಿವಿಗೆ ಹವಾಮಾನ ವರದಿ ನೀಡುತ್ತಿದ್ದಾಗ ಗೋಲ್ಡನ್ ರಿಟ್ರೈವರ್ ಮೇಲಕ್ಕೆ ಹಾರಿ ಮೈಕ್ರೊಫೋನ್ ಅನ್ನು ಕೈಯಿಂದ ಕಸಿದುಕೊಂಡಿತ್ತು.