189 ಕ್ಷೇತ್ರಗಳಿಗೆ ಬಿಜೆಪಿ ಹೈಕಮಾಂಡ್ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದ ಬಳಿಕ ಅವಕಾಶ ವಂಚಿತರ ಅಸಮಾಧಾನ ಭುಗಿಲೇಳುತ್ತಿದೆ. ಅಥಣಿ ಕ್ಷೇತ್ರದ ಆಕಾಂಕ್ಷಿಯಾಗಿದ್ದ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಈಗಾಗಲೇ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದು, ಬೈಲಹೊಂಗಲ ಕ್ಷೇತ್ರದ ಆಕಾಂಕ್ಷಿ ಡಾ. ವಿಶ್ವನಾಥ್ ಕೂಡ ಇದೇ ಹಾದಿ ಹಿಡಿಯಲು ಮುಂದಾಗಿದ್ದಾರೆ ಎನ್ನಲಾಗಿದೆ.
ಇನ್ನು ರಾಣೆಬೆನ್ನೂರು ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಆರ್. ಶಂಕರ್ ಕೂಡ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದು, ಚುನಾವಣೆಯಲ್ಲಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಇನ್ನು ಉಡುಪಿ ಕ್ಷೇತ್ರದ ಟಿಕೆಟ್ ನಿರೀಕ್ಷೆಯಲ್ಲಿದ್ದ ಶಾಸಕ ರಘುಪತಿ ಭಟ್ ಪಕ್ಷ ತಮ್ಮನ್ನು ನಡೆಸಿಕೊಂಡ ರೀತಿಗೆ ಕಣ್ಣೀರಿಟ್ಟಿದ್ದಾರಲ್ಲದೆ ನಾನು ಯಾವುದೇ ಪಕ್ಷಕ್ಕೆ ಸೇರ್ಪಡೆಯಾಗುವುದಿಲ್ಲ. ಆದರೆ ಅಭಿಮಾನಿಗಳ ರಾಜಕೀಯ ಜೀವನಕ್ಕೆ ಅನುಕೂಲವಾಗುವಂತಹ ತೀರ್ಮಾನ ಕೈಗೊಳ್ಳುತ್ತೇನೆ ಎಂದಿದ್ದಾರೆ.
ಬ್ಯಾಟರಾಯನಪುರ ಕ್ಷೇತ್ರದಲ್ಲೂ ಮುನೀಂದ್ರ ಅವರು ಪಕ್ಷದ ವಿರುದ್ಧ ಸಿಡಿದೆದ್ದಿದ್ದು ಬೆಂಬಲಿಗರ ಜೊತೆ ಸಭೆ ನಡೆಸುತ್ತಿದ್ದಾರೆ. ಇನ್ನು ಹಿರಿಯ ನಾಯಕ ಜಗದೀಶ್ ಶೆಟ್ಟರ್ ನಾನು ಚುನಾವಣೆಯಲ್ಲಿ ಸ್ಪರ್ಧಿಸಿಯೇ ತೀರುತ್ತೇನೆ ಎಂದಿರುವುದು ಬಿಜೆಪಿ ವರಿಷ್ಠರಿಗೆ ಇರುಸು ಮುರುಸು ಉಂಟು ಮಾಡಿದೆ. ಅಸಮಾಧಾನ ಮುಂದಿನ ದಿನಗಳಲ್ಲಿ ಮತ್ತಷ್ಟು ಕ್ಷೇತ್ರಕ್ಕೆ ವ್ಯಾಪಿಸುವ ಸಾಧ್ಯತೆ ಇದ್ದು, ಜೊತೆಗೆ ಎರಡನೇ ಪಟ್ಟಿ ಬಿಡುಗಡೆ ಬಳಿಕವೂ ಅಸಮಾಧಾನಿತರ ಸಂಖ್ಯೆ ಹೆಚ್ಚಾಗಲಿದೆ. ಚುನಾವಣಾ ಫಲಿತಾಂಶದ ಮೇಲೆ ಇದು ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ಕಾದು ನೋಡಬೇಕಿದೆ.