ಧಾರವಾಡ: ವಿಧಾನಸಭಾ ಚುನಾವಣೆಗೆ ಇನ್ನೇನು ಐದಾರು ತಿಂಗಳು ಬಾಕಿ ಇದೆ. ಈಗಾಗಲೇ ಎಲ್ಲಾ ಪಕ್ಷಗಳು ಪ್ರಚಾರ ಕಾರ್ಯ ಪ್ರಾರಂಭ ಮಾಡಿವೆ. ಅಧಿಕೃತವಾಗಿ ಯಾವ ಪಕ್ಷವೂ ತಮ್ಮ ಅಭ್ಯರ್ಥಿ ಘೋಷಣೆ ಮಾಡಿಲ್ಲ. ಆದರೆ ಧಾರವಾಡದಲ್ಲಿ ಕೈ ನಾಯಕರೊಬ್ಬರು ಟಿಕೆಟ್ ಘೋಷಣೆ ಆಗದೇ ಇದ್ದರೂ ಪ್ರಚಾರ ಶುರು ಮಾಡಿದಂತಿದೆ. ಮತದಾರರಿಗೆ ಕುಕ್ಕರ್ ಕೊಡುವ ಮೂಲಕ ಪಾಲಿಟಿಕ್ಸ್ ಶುರು ಮಾಡಿದ್ದಾರೆ.
ಹೌದು, ಕಲಘಟಗಿ ವಿಧಾನ ಸಭಾ ಕ್ಷೇತ್ರದಲ್ಲಿ ಕುಕ್ಕರ್ ಪಾಲಿಟಿಕ್ಸ್ ಶುರುವಾಗಿದೆ. ಇಲ್ಲಿನ ಟಿಕೆಟ್ ಆಕಾಂಕ್ಷಿ ನಾಗರಾಜ್ ಛಬ್ಬಿ ಮತದಾರರಿಗೆ ಆಮಿಷ ಒಡ್ಡಿದ್ದಾರೆ. ಇನ್ನು ಛಬ್ಬಿ ಅವರು ಎಐಸಿಸಿ ಮಲ್ಲಿಕಾರ್ಜುನ ಖರ್ಗೆ ಮತ್ತು ಡಿಕೆ ಶಿವಕುಮಾರ್ ಪರಮ ಆಪ್ತರಂತೆ. ಕಲಘಟಗಿ ಕ್ಷೇತ್ರದಲ್ಲಿ ಸರಿ ಸುಮಾರು 80 ಸಾವಿರ ಕುಕ್ಕರ್ ಹಂಚಿಕೆ ಮಾಡಲು ಮುಂದಾಗಿದ್ದಾರಂತೆ.
ಇನ್ನು ಕಲಘಟಗಿ ತಾಲೂಕಿನ ಹಿರೇ ಹೊನ್ನಳ್ಳಿ ಗ್ರಾಮದಿಂದ ಕುಕ್ಕರ್ ಹಂಚಿಕೆ ಮಾಡಲಾಗುತ್ತಿದೆಯಂತೆ. ಈ ಕ್ಷೇತ್ರದಿಂದ ಕಲಘಟಗಿ ಟಿಕೆಟ್ ಗಾಗಿ ಮಾಜಿ ಶಾಸಕ ಸಂತೋಷ್ ಲಾಡ್ ಕೂಡ ಇದ್ದು, ಅವರಿಗೆ ಪ್ರಬಲ ಪೈಪೋಟಿ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ. ಸದ್ಯ ಕುಕ್ಕರ್ ಪಾಲಿಟಿಕ್ಸ್ ಶುರುವಾಗಿದೆ. ಟಿಕೆಟ್ ಇನ್ನೂ ಫೈನಲ್ ಆಗಿಲ್ಲ. ಆದರೂ ಮತದಾರರಿಗೆ ಆಮಿಷ ಒಡ್ಡೋದು ಶುರುವಾಗಿದೆ.