ವಿಶಾಖಪಟ್ಟಣಂ: ಭಾರೀ ವಿದ್ಯುತ್ ಕಡಿತದ ನಡುವೆ, ಮಹಿಳೆಯೊಬ್ಬರು ಟಾರ್ಚ್ ಬೆಳಕಿನಲ್ಲಿ ಮಗುವಿಗೆ ಜನ್ಮ ನೀಡಿರೋ ಘಟನೆ ವಿಶಾಖಪಟ್ಟಣಂನಲ್ಲಿ ವರದಿಯಾಗಿದೆ.
ನರಸೀಪಟ್ಟಣಂ ಪ್ರದೇಶದಲ್ಲಿ ಭಾರಿ ವಿದ್ಯುತ್ ಕಡಿತದಿಂದಾಗಿ, ಮಧ್ಯರಾತ್ರಿ ವಿಶಾಖಪಟ್ಟಣಂನ ಎನ್‌ಟಿಆರ್ ಸರ್ಕಾರಿ ಆಸ್ಪತ್ರೆಯಲ್ಲಿ ಸೆಲ್ ಫೋನ್‌ಗಳು, ಟಾರ್ಚ್‌ಗಳು ಮತ್ತು ಕ್ಯಾಂಡಲ್‌ಗಳ ಬೆಳಕಿನಲ್ಲಿ ಮಹಿಳೆಯೊಬ್ಬರು ತನ್ನ ಮಗುವಿಗೆ ಜನ್ಮ ನೀಡಬೇಕಾಯಿತು. ಈ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.
ಹೊಸದಾಗಿ ರೂಪುಗೊಂಡ ಅನಕಪಲ್ಲಿ ಜಿಲ್ಲೆಯಲ್ಲಿರುವ ಆಸ್ಪತ್ರೆಯು ಕಳೆದ ಎರಡು ದಿನಗಳಿಂದ ಸುದೀರ್ಘ ವಿದ್ಯುತ್ ಕಡಿತವನ್ನು ಎದುರಿಸುತ್ತಿದೆ. ಕೃಷ್ಣಾದೇವಿಪಟ ಮಹಿಳೆಯ ಪರಿಚಾರಕರಿಗೆ ಸಾಧ್ಯವಾದಷ್ಟು ದೀಪಗಳ ವ್ಯವಸ್ಥೆ ಮಾಡುವಂತೆ ಸಿಬ್ಬಂದಿ ಹೇಳಿದ್ದರು.
ಮಧ್ಯರಾತ್ರಿಯಲ್ಲಿ ಮೇಣದಬತ್ತಿಗಳನ್ನು ತರಲು ಮತ್ತು ಸಾಧ್ಯವಾದಷ್ಟು ಸೆಲ್‌ಫೋನ್‌ಗಳು ಮತ್ತು ಟಾರ್ಚ್ ಲೈಟ್‌ಗಳನ್ನು ವ್ಯವಸ್ಥೆ ಮಾಡುವಂತೆ ಕೇಳಿಕೊಂಡಿದ್ದರು ಎಂದು ಮಹಿಳೆಯ ಪತಿ ಹೇಳಿದ್ದಾರೆ.
ಮಹಿಳೆಗೆ ಆಗಲೇ ಹೆರಿಗೆ ನೋವು ಕಾಣಿಸಿಕೊಂಡಿದ್ದು, ನಿರ್ವಹಣೆ ಕೊರತೆಯಿಂದ ಆಸ್ಪತ್ರೆಯ ಜನರೇಟರ್ ಕೂಡ ಕೆಟ್ಟು ಹೋಗಿತ್ತು. ನಮಗೆ ಬೇರೆ ದಾರಿಯೇ ಇರಲಿಲ್ಲ, ಗರ್ಭಿಣಿಯ ಹೆರಿಗೆ ಮಾಡಿಸಲು ಬೆಳಕಿನ ವ್ಯವಸ್ಥೆ ಮಾಡುವಂತೆ ಕೇಳಿಕೊಳ್ಳಲಾಗಿತ್ತು ಅಂತಾ ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದಾರೆ.