ದೇಶದ ಪ್ರಮುಖ ಕಾರು ತಯಾರಿಕಾ ಸಂಸ್ಥೆ ಟಾಟಾ ಮೋಟಾರ್ಸ್ ಗ್ರಾಹಕರಿಗೆ ಶಾಕ್ ಕೊಟ್ಟಿದೆ. ಇನ್ಮೇಲೆ ಈ ಕಂಪನಿಯ ಕಾರುಗಳನ್ನು ಖರೀದಿಸಲು ಹೆಚ್ಚಿನ ಮೊತ್ತವನ್ನು ಪಾವತಿಸಬೇಕಾಗುತ್ತದೆ.
ಟಾಟಾ ಮೋಟಾರ್ಸ್ ತನ್ನ ಪ್ರಯಾಣಿಕ ವಾಹನಗಳ ಬೆಲೆಯನ್ನು ಹೆಚ್ಚಿಸಿದೆ. ಬೆಲೆಗಳನ್ನು ಸರಾಸರಿ ಶೇ.0.9ರಷ್ಟು ಏರಿಕೆ ಮಾಡಲಾಗಿದೆ. ಪರಿಷ್ಕೃತ ಬೆಲೆಗಳು ನವೆಂಬರ್ 7 ರಿಂದ ಅನ್ವಯವಾಗಲಿದೆ. ಹಳೆಯ ಬೆಲೆಗೇ ಕಾರು ಕೊಂಡುಕೊಳ್ಳಲು ಗ್ರಾಹಕರಿಗೆ ಕೇವಲ ಒಂದು ದಿನ ಮಾತ್ರ ಅವಕಾಶವಿದೆ.
ಟಾಟಾ ಮೋಟಾರ್ಸ್ ಪ್ರಸ್ತುತ ಟಿಯಾಗೊ, ಪಂಚ್, ನೆಕ್ಸನ್, ಹ್ಯಾರಿಯರ್ ಮತ್ತು ಸಫಾರಿ ಮಾಡೆಲ್‌ಗಳನ್ನು ಮಾರಾಟ ಮಾಡುತ್ತಿದೆ. ಈ ವಾಹನಗಳ ಹಲವು ಆವೃತ್ತಿಗಳು ಸಹ ಲಭ್ಯವಿವೆ. ವಾಹನಗಳ ಬೆಲೆಯನ್ನು ಅವುಗಳ ಮಾದರಿಗಳು ಮತ್ತು ರೂಪಾಂತರಗಳಿಗೆ ಅನುಗುಣವಾಗಿ ವಿಭಿನ್ನವಾಗಿ ಏರಿಕೆ ಮಾಡಲಾಗುತ್ತದೆ. ಸರಾಸರಿ ಬೆಲೆ ಹೆಚ್ಚಳ ಶೇಕಡಾ 0.9 ರಷ್ಟಿರುವುದರಿಂದ ಗ್ರಾಹಕರಿಗೆ ಹೆಚ್ಚಿನ ಹೊರೆಯಾಗುವುದಿಲ್ಲ ಎನ್ನುತ್ತಿದೆ ಕಂಪನಿ.
ಟಾಟಾ ಮೋಟಾರ್ಸ್ ವಾಹನ ತಯಾರಿಕೆಯ ಹೆಚ್ಚುವರಿ ವೆಚ್ಚದ ಬಹುತೇಕ ಪಾಲನ್ನು ತಾನೇ ಭರಿಸುತ್ತಿರುವುದಾಗಿ ಹೇಳಿಕೊಂಡಿದೆ. ಆದರೆ ಇನ್ಪುಟ್ ವೆಚ್ಚದಲ್ಲಿ ತೀವ್ರ ಏರಿಕೆಯಿಂದಾಗಿ ಬೆಲೆ ಹೆಚ್ಚಳ ಅನಿವಾರ್ಯ ಎನ್ನುತ್ತಿದೆ. ಇದಕ್ಕೂ ಮೊದಲು ಟಾಟಾ ಮೋಟಾರ್ಸ್ ಜುಲೈ ತಿಂಗಳಿನಲ್ಲೂ ಪ್ರಯಾಣಿಕ ವಾಹನಗಳ ಬೆಲೆಯನ್ನು ಹೆಚ್ಚಿಸಿತ್ತು. ಆ ಸಮಯದಲ್ಲಿ ಕಂಪನಿ ತನ್ನ ಕಾರುಗಳ ಬೆಲೆಯಲ್ಲಿ ಶೇ. 0.55 ರಷ್ಟು ಹೆಚ್ಚಳವನ್ನು ಘೋಷಿಸಿತ್ತು.
ಟಾಟಾ ಮೋಟಾರ್ಸ್ ಸದ್ಯ ಎಸ್‌ಯುವಿ ಕಾರುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿದೆ. ಅಕ್ಟೋಬರ್ ತಿಂಗಳಿನಲ್ಲಿ ಟಾಟಾ ನೆಕ್ಸಾನ್ SUV ಮಾರುಕಟ್ಟೆಗೆ ರೀ ಎಂಟ್ರಿಯಾಗಿದೆ. ಕಳೆದ ತಿಂಗಳು ಟಾಟಾ ಮೋಟಾರ್ಸ್ ನೆಕ್ಸಾನ್ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿಯ ಒಟ್ಟು 13,767 ಯುನಿಟ್‌ಗಳನ್ನು ಮಾರಾಟ ಮಾಡಿತ್ತು. ಟಾಟಾ ನೆಕ್ಸಾನ್‌ನ ಪ್ರಸ್ತುತ ಬೆಲೆ 7.60 ಲಕ್ಷದಿಂದ 14.08 ಲಕ್ಷ ರೂಪಾಯಿವರೆಗೂ ಇದೆ.