ಟಾಟಾ ಮೋಟಾರ್ಸ್ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ನಂಬರ್ ವನ್ ಸ್ಥಾನದಲ್ಲಿದೆ. ಕಂಪನಿಯ ಟಾಟಾ ನೆಕ್ಸಾನ್ ದೇಶದಲ್ಲಿ ಅತಿ ಹೆಚ್ಚು ಮಾರಾಟವಾಗುವ ಎಲೆಕ್ಟ್ರಿಕ್ ಕಾರು. ಟಾಟಾ ವಾಹನಗಳು ಸುರಕ್ಷತೆಗೂ ಹೆಸರುವಾಸಿಯಾಗಿದೆ. Nexo EVಯ ಹೊರತಾಗಿ ಕಂಪನಿ ಟಾಟಾ ಟಿಗೊರ್ EV ಮತ್ತು ಟಾಟಾ ಟಿಯಾಗೊ EV ಯಂತಹ ಕಾರುಗಳನ್ನು ಸಹ ಮಾರಾಟ ಮಾಡುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಈ ವಾಹನಗಳನ್ನು ಖರೀದಿಸಲು ತಮ್ಮ ಅಮೂಲ್ಯ ಹಣವನ್ನು ಹೂಡಿಕೆ ಮಾಡುತ್ತಿದ್ದಾರೆ.
ಆದ್ರೆ ಟಾಟಾ ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸಿ ತಾವು ಮೋಸ ಹೋಗ್ತಿದ್ದೇವೆ ಎಂಬ ಭಾವನೆ ಗ್ರಾಹಕರಲ್ಲಿ ಬಂದಿದೆ. ಇದಕ್ಕೆ ಕಾರಣ ಕಾರುಗಳಲ್ಲಿ ಕಾಣಿಸಿಕೊಳ್ತಿರೋ ದೋಷಗಳು. ಈ ಬಗ್ಗೆ ಕೆಲವು ಗ್ರಾಹಕರು ಟಾಟಾ ಮೋಟಾರ್ಸ್‌ನ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್ ಟ್ವಿಟರ್ ಖಾತೆಯಲ್ಲಿ ದೂರು ದಾಖಲಿಸಿದ್ದಾರೆ. ತಮ್ಮ ಹೊಸ ಟಾಟಾ ಎಲೆಕ್ಟ್ರಿಕ್ ಕಾರಿನಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ಟ್ವೀಟ್‌ಗಳ ಮೂಲಕ ಹಂಚಿಕೊಂಡಿದ್ದಾರೆ. ಕೆಲವು ಬಳಕೆದಾರರು ಸಾಫ್ಟ್‌ವೇರ್ ಸಮಸ್ಯೆಯಿಂದ ತೊಂದರೆಗೀಡಾಗಿದ್ದರೆ.
ಓರ್ವ ಗ್ರಾಹಕ ಟೈರ್‌ನ ಸಮಸ್ಯೆ ಬಗ್ಗೆ ವಿವರಿಸಿದ್ದಾರೆ. ಹೊಸ ನೆಕ್ಸಾನ್ EV ಪ್ರೈಮ್ ಖರೀದಿಸಿದ ದಿನದಿಂದಲೇ ಸಾಫ್ಟ್‌ವೇರ್ ಮತ್ತು ಎಂಜಿನ್ ಸಮಸ್ಯೆಗಳನ್ನು ಹೊಂದಿದೆಯಂತೆ. ಬಬಿತಾ ಎಂಬುವವರು ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ. ಆಕಾಶ್ ಎಂಬಾತ ಕೂಡ Nexon ev ಕೊಂಡುಕೊಂಡಿದ್ದು, ಖರೀದಿಸಿದ ದಿನವೇ ಅದು ಕೆಟ್ಟು ಹೋಗಿದೆಯಂತೆ. ಹಳೆ ಕಾರನ್ನು ತಮಗೆ ಕೊಡಲಾಗಿದೆ ಅನ್ನೋದು ಅವರ ಆರೋಪ. ರಿಪೇರಿಗಾಗಿ ಲಕ್ಷಗಟ್ಟಲೆ ಖರ್ಚು ಮಾಡಬೇಕಾಯ್ತು ಅಂತಾ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಅದೇ ರೀತಿ ಟಾಟಾದ ಎಲೆಕ್ಟ್ರಿಕ್ ಕಾರುಗಳ ಟೈರ್‌ಗಳಲ್ಲೂ ದೋಷ ಕಂಡುಬಂದಿದೆ. ಖರೀದಿ ಮಾಡಿ ವಾರ ಕಳೆಯುವಷ್ಟರಲ್ಲಿ ಟೈರ್ ಒಂದು ಭಾಗದಲ್ಲಿ ಉಬ್ಬಿಕೊಂಡಿದೆಯಂತೆ. ಆದ್ರೆ ಕಂಪನಿಯು ಟೈರ್ ಬದಲಾಯಿಸಲು ನಿರಾಕರಿಸಿದೆ. ಇಂತಹ ಅನೇಕ ಸಮಸ್ಯೆಗಳು ಇಲೆಕ್ಟ್ರಿಕ್ ಕಾರುಗಳಲ್ಲಿ ಕಂಡು ಬಂದಿದ್ದು ಗ್ರಾಹಕರು ಕಂಗಾಲಾಗಿದ್ದಾರೆ.