ಇಂದೋರ್- ಭಾರತ್ ಜೋಡೋ ಯಾತ್ರೆ ಅಗರ್ ಮಾಲ್ವಾ ಜಿಲ್ಲೆಯಿಂದ ಸಾಗಿದೆ. ಈಗಾಗಲೇ ಸಾಕಷ್ಟು ಕಡೆ ಯಶಸ್ವಿಯಾಗಿರುವ ಭಾರತ್ ಜೋಡೋ ಯಾತ್ರೆಗೆ ದಾರ್ಶನಿಕರು, ಸಿನಿಮಾದವರು ಹೀಗೆ ಅನೇಕರ ಭಾಗಿಯಾಗುತ್ತಿದ್ದಾರೆ. ಇಂದು ವಿವಾದಿತ ದೇವಮಾನವ ಎಂದು ಸ್ವಯಂ ಘೋಷಣೆ ಮಾಡಿಕೊಂಡಿರುವ ನಾಮದೇವ್ ದಾಸ್ ತ್ಯಾಗಿ ಕಂಪ್ಯೂಟರ್ ಬಾಬಾ ಕೂಡ ರಾಗಾ ಜೊತೆಗೆ ಹೆಜ್ಜೆ ಹಾಕಿದ್ದಾರೆ. ಈ ವಿಚಾರಕ್ಕೆ ಬಿಜೆಪಿ ಟೀಕೆ ಮಾಡಿದೆ.
ಹೌದು, ಈ ನಾಮದೇವ್ ದಾಸ್ ತ್ಯಾಗಿಯವರು ಪ್ರಕರಣವೊಂದರಲ್ಲಿ 2020 ರಲ್ಲಿ ಬಂಧನಕ್ಕೆ ಒಳಪಟ್ಟಿದ್ದರು. ಇವರನ್ನು ಜೋಡೋ ಯಾತ್ರೆಯಲ್ಲಿ ಜೊತೆಯಲ್ಲೇ ನಡೆಸಿದ್ದಕ್ಕೆ ಬಿಜೆಪಿ ಟೀಕೆ ಮಾಡಿದೆ. ಈ ಹಿಂದೆ ಅತಿಕ್ರಮಣ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳನ್ನ ಕಾಂಗ್ರೆಸ್ ಹೇಗೆ ನಡೆಸಿಕೊಳ್ಳುತ್ತಾರೆ..? ಎಂದು ಬಿಜೆಪಿ ಪ್ರಶ್ನಿಸಿದೆ. ಈ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ನ ಮಾಜಿ ಸಚಿವ ರಾಜ್‌ಕುಮಾರ್ ಪಟೇಲ್, ಭಾರತ್ ಜೋಡೋ ಯಾತ್ರೆಯಲ್ಲಿ ಹಲವಾರು ದಾರ್ಶನಿಕರು ಮತ್ತು ಧಾರ್ಮಿಕ ಮುಖಂಡರು ಅದರ ಒಂದು ಭಾಗವಾಗುತ್ತಿದ್ದಾರೆ. ಇದು ದೇಶದ ಹಿತದೃಷ್ಟಿಯಿಂದ ಮಾತ್ರ. ಹೀಗಾಗಿ ಯಾತ್ರೆಯಲ್ಲಿ ಪಾಲ್ಗೊಳ್ಳಲು ಎಲ್ಲರಿಗೂ ಸ್ವಾಗತವಿದೆ ಎಂದಿದ್ದಾರೆ.
ಇನ್ನು ಈ ಕಂಪ್ಯೂಟರ್ ಬಾಬಾ ಇಂದು ಬೆಳಗ್ಗೆ ಅಗರ್ ಮಾಲ್ವಾ ಜಿಲ್ಲೆಯ ಮಹುದಿಯಾ ಗ್ರಾಮದಲ್ಲಿ ರಾಗಾ ಜೊತೆ ಹೆಜ್ಜೆ ಹಾಕಿದ್ದಾರೆ. ಜೊತೆಗೆ ರಾಹುಲ್ ಗಾಂಧಿ ಮತ್ತು ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರೊಂದಿಗೆ ಕೆಲ ಕಾಲ ಸಂವಾದ ನಡೆಸಿದ್ದಾರೆ.