ಉತ್ತರ ಪ್ರದೇಶ- ಹೋಟೆಲ್ ಗೆ ಬರುವ ಜೋಡಿಗಳ ಖಾಸಗಿತನವನ್ನು ರಹಸ್ಯ ಕ್ಯಾಮರಾ ಇಟ್ಟು ರೆಕಾರ್ಡ್ ಮಾಡುತ್ತಿದ್ದ ಆರೋಪಿಗಳನ್ನು ನೋಯ್ಡಾ ಪೊಲೀಸರು ಬಂಧಿಸಿದ್ದಾರೆ. ರಹಸ್ಯ ಕ್ಯಾಮರ ಇಟ್ಟು ರೆಕಾರ್ಡ್ ಮಾಡುತ್ತಿದ್ದ ಘಟನೆ ಉತ್ತರ ಪ್ರದೇಶದ ನೋಯ್ದಾದಲ್ಲಿ ಇರುವ ಓಯೋ ಹೋಟೆಲ್ ನಲ್ಲಿ ನಡೆದಿದೆ.
ವಿಷ್ಣು ಸಿಂಗ್, ಅಬ್ದುಲ್ ವಹಾವ್, ಪಂಕಜ್ ಕುಮಾರ್ ಮತ್ತು ಅನುರಾಗ್ ಕುಮಾರ್ ಸಿಂಗ್ ಬಂಧಿತ ಆರೋಪಿಗಳಾಗಿದ್ದು, ಇವರಿಂದ 21 ಮೊಬೈಲ್ ಫೋನ್, 22 ಎಟಿಎಂ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಹೋಟೆಲ್ ಗೆ ಮೊದಲು ಈ ಆರೋಪಿಗಳು ಬಂದು ರೂಂ ಪಡೆದು ಕ್ಯಾಮರಾ ಫಿಕ್ಸ್ ಮಾಡಿ, ರೂಂ ಚೆಕ್ ಔಟ್ ಮಾಡ್ತಾ ಇದ್ರಂತೆ. ಯಾರಾದರೂ ಕಪಲ್ಸ್ ಬಂದು ಇದೇ ರೂಂ ಪಡೆದ ಅವರು ಹೋದ ನಂತರ ಈ ರೂಂ ನ ಈ ಆರೋಪಿಗಳು ಮತ್ತೆ ಪಡೆದು, ಅಲ್ಲಿ ರಹಸ್ಯವಾಗಿ ಇಟ್ಟಿದ್ದ ಕ್ಯಾಮರಾಗಳನ್ನು ತೆಗೆದುಕೊಂಡು ವಾಪಸ್ ಆಗ್ತಾ ಇದ್ರಂತೆ.
ಈ ವೇಳೆ ಜೋಡಿಗಳ ಖಾಸಗಿ ವಿಡಿಯೋಗಳನ್ನು ಇಟ್ಟುಕೊಂಡು ಅವರನ್ನು ಸಂಪರ್ಕ ಮಾಡಿ ಹಣಕ್ಕಾಗಿ ಬೇಡಿಕೆ ಇಡ್ತಾ ಇದ್ರಂತೆ. ಹಣ ಕೊಡದೇ ಇದ್ದರೆ ವಿಡಿಯೋ ಲೀಕ್ ಮಾಡೋದಾಗಿ ಬೆದರಿಕೆ ಹಾಕುತ್ತಿದ್ದರು ಎನ್ನಲಾಗಿದೆ. ಇನ್ನು ಇಲ್ಲಿ ಅಷ್ಟೆ ಅಲ್ಲ ಬೇರೆ ಬೇರೆ ಕೃತ್ಯಗಳನ್ನು ಇವರು ನಡೆಸುತ್ತಿದ್ದರು ಎನ್ನಲಾಗಿದೆ.