ಅಹಮದಾಬಾದ್: ಯುಕೆ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಮೊದಲ ಬಾರಿ ಭಾರತ ಪ್ರವಾಸ ಕೈಗೊಂಡಿದ್ದು, ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ಅವರೊಂದಿಗೆ ಗುರುವಾರ ಗುಜರಾತ್‌ನ ಪಂಚಮಹಲ್ ನ ಹಲೋಲ್ ಜಿಐಡಿಸಿಯಲ್ಲಿರುವ ಜೆಸಿಬಿ ಕಾರ್ಖಾನೆಗೆ ಭೇಟಿ ನೀಡಿದ್ದಾರೆ.
ಅಲ್ಲಿನ ಜೆಸಿಬಿ ಯಂತ್ರ ಕಂಡು ಖುಷಿಪಟ್ಟ ಬ್ರಿಟನ್ ಪ್ರಧಾನಿ ಬೋರಿಸ್, ಹೊಸ ಕಾರ್ಖಾನೆಯಲ್ಲಿ ಜೆಸಿಬಿ ಮೇಲೆ ಹತ್ತಿ ಅದನ್ನು ಚಲಾಯಿಸಲು ಪ್ರಯತ್ನಿಸಿದ್ದಾರೆ. ತದ ನಂತರ ಜೆಸಿಬಿ ಒಳಗೆಯೇ ನಿಂತು ಮಾಧ್ಯಮದವರತ್ತ ಕೈಬೀಸಿದ್ದಾರೆ. ಈ ಸಂಬಂಧದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇಂದು ಬೆಳಿಗ್ಗೆ ಗುಜರಾತಿನ ಸಾಬರಮತಿ ಆಶ್ರಮಕ್ಕೆ ಭೇಟಿ ನೀಡಿದ್ದ ಅವರು ರಾಷ್ಟ್ರಪಿತ ಮಹಾತ್ಮಗಾಂಧಿ ಭಾವಚಿತ್ರಕ್ಕೆ ಮಾಲೆ ಹಾಕಿ ಅಲ್ಲಿಯೇ ಇದ್ದ ಚರಕವನ್ನು ತಿರುಗಿಸಿ ಖುಷಿ ಪಟ್ಟಿದ್ದಾರೆ. ಜೊತೆಗೆ ಜಾನ್ಸನ್, ಉದ್ಯಮಿ ಗೌತಮ್ ಅದಾನಿಯನ್ನು ಭೇಟಿ ಮಾಡಿದ್ದಾರೆ. ಅಲ್ಲದೇ ಗಾಂಧಿನಗರದಲ್ಲಿರುವ ಅಕ್ಷರಧಾಮ ದೇವಾಲಯಕ್ಕೆ ಭೇಟಿ ನೀಡಿದರು.