
ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ಭರ್ಜರಿ ಪ್ರಚಾರ ಕಾರ್ಯ ಆರಂಭಿಸಿದೆ. ಶನಿವಾರದಂದು ವಿಜಯ ಸಂಕಲ್ಪ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಇದರಲ್ಲಿ ಪಾಲ್ಗೊಂಡಿದ್ದಾರೆ.
ವಿಜಯಪುರ ನಗರ ಹಾಗೂ ಸಿಂಧಗಿಯಲ್ಲಿ ಜೆ.ಪಿ. ನಡ್ಡಾ ಭಾಗವಹಿಸಿದ್ದ ಕಾರ್ಯಕ್ರಮಕ್ಕೆ ಗೈರು ಹಾಜರಾಗುವ ಮೂಲಕ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅಚ್ಚರಿ ಮೂಡಿಸಿದ್ದಾರೆ. ಅಲ್ಲದೆ ಕಲಬುರಗಿಯಿಂದ ಹೆಲಿಕ್ಯಾಪ್ಟರ್ ಮೂಲಕ ಬಂದಿಳಿದ ನಡ್ಡಾ ಅವರನ್ನು ಸ್ವಾಗತಿಸಲು ಸಹ ಯತ್ನಾಳ್ ಅವರು ಹೋಗಿಲ್ಲ.
ಈ ಹಿಂದಿನಿಂದಲೂ ಯಡಿಯೂರಪ್ಪ, ಮುರುಗೇಶ್ ನಿರಾಣಿ ಸೇರಿದಂತೆ ಸ್ವಪಕ್ಷೀಯ ನಾಯಕರುಗಳ ವಿರುದ್ಧವೇ ಬಸನಗೌಡ ಪಾಟೀಲ್ ತೀವ್ರ ವಾಗ್ದಾಳಿ ನಡೆಸುತ್ತಿದ್ದು, ಬಿಜೆಪಿ ನಾಯಕರಿಗೆ ಇರುಸುಮುರುಸು ತಂದಿದ್ದಾರೆ. ಹೀಗಾಗಿ ಬಿಜೆಪಿ ವರಿಷ್ಠರು ಮೌನ ವಹಿಸುವಂತೆ ತಾಕೀತು ಮಾಡಿದ್ದು, ಇದರಿಂದ ಮುನಿಸಿಕೊಂಡು ಯತ್ನಾಳ್ ಕಾರ್ಯಕ್ರಮದಲ್ಲಿ ಭಾಗವಹಿಸಲಿಲ್ಲವೆಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.