alex Certify ಜೆಡಿಎಸ್ ಓಡಿಸಿ ಅನ್ನುವುದಕ್ಕೆ ತುಮಕೂರು ಜಿಲ್ಲೆಯೇನು ನಿಮ್ಮಪ್ಪನ ಜಹಗೀರಾ…..? ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜೆಡಿಎಸ್ ಓಡಿಸಿ ಅನ್ನುವುದಕ್ಕೆ ತುಮಕೂರು ಜಿಲ್ಲೆಯೇನು ನಿಮ್ಮಪ್ಪನ ಜಹಗೀರಾ…..? ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ

ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ತುಮಕೂರಿನಿಂದ ಜೆಡಿಎಸ್ ಓಡಿಸಿ ಅನ್ನುವುದಕ್ಕೆ ತುಮಕೂರು ಜಿಲ್ಲೆಯೇನು ನಿಮಪ್ಪನ ಜಹಗೀರಾ? ಅಥವಾ ಕಾಂಗ್ರೆಸ್ ನ ಪಿತ್ರಾರ್ಜಿತ ಆಸ್ತಿಯಾ? ಎಂದು ಪ್ರಶ್ನಿಸಿದ್ದಾರೆ.

ಚಾಮುಂಡೇಶ್ವರಿ ಕ್ಷೇತ್ರದಿಂದ ನಿಮ್ಮನ್ನು ಜನರು ಓಡಿಸಿದ್ದು ಮರೆತುಬಿಟ್ಟಿರಾ? ಈ ಸಲ ಬಾದಾಮಿಯಿಂದಲೂ ಓಡಬೇಕಾಗುತ್ತದೆ ಎಂದು ಕುಮಾರಸ್ವಾಮಿ ಸರಣಿ ಟ್ವೀಟ್ ಗಳ ಮೂಲಕ ಸಿದ್ದರಾಮಯ್ಯ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ಸೇರುವ ಮೊದಲು ನೀವು ಯಾರ ಬಾಲಂಗೋಚಿಯಾಗಿದ್ದಿರಿ? ಗುರುಸ್ವಾಮಿ ಅವರೆದುರು ಸೋತುಸುಣ್ಣವಾದ ಮೇಲೆ ಅನುಗ್ರಹಕ್ಕೆ ಬಂದು ಯಾರ ಮುಂದೆ ಗಳಗಳನೆ ಅತ್ತು ರಾಜಕೀಯ ಬಿಟ್ಟು ವಕೀಲಿ ಮಾಡುತ್ತೇನೆ ಎಂದಿರಿ ನೆನೆಪಿದೆಯಾ ಸಿದ್ದರಾಮಯ್ಯ? ಆಗ ನಿಮಗೆ ಬಾಲಂಗೋಚಿತನ ನೆನಪಾಗಲಿಲ್ಲವೇ? ಪ್ರತಿಯೊಂದಕ್ಕೂ ಈ ಸರಕಾರಕ್ಕೆ ಜೆಡಿಎಸ್ ಬೆಂಬಲ ನೀಡುತ್ತಿದೆ ಎನ್ನುವ ನಿಮ್ಮ ಸುಳ್ಳು ನಾಲಗೆ ಅದೇ ಸರಕಾರ ಬರಲು ಮೂಲ ಕಾರಣರಾದ ಸಿದ್ದಪುರುಷ ಯಾರು ಎನ್ನುವುದನ್ನು ಹೇಳಲಿಲ್ಲವೇ? ಪಕ್ಷದ್ರೋಹ ತಾಯಿಗೆ ಮಾಡುವ ದ್ರೋಹಕ್ಕೆ ಸಮಾನ. ನಿಮ್ಮ ದ್ರೋಹ ಮುಚ್ಚಿಟ್ಟುಕೊಳ್ಳಲು ಜೆಡಿಎಸ್ ಜಪವಾ ಸಿದ್ದರಾಮಯ್ಯ? ಎಂದು ಗುಡುಗಿದ್ದಾರೆ.

ಮತ್ತೆ ಮುಖ್ಯಮಂತ್ರಿಯಾಗಬೇಕುನ್ನುವ ದುರಾಸೆ, ಅವಕಾಶ ಸಿಗದೇನೋ ಎನ್ನುವ ಹತಾಶೆ. ಅಭ್ಯರ್ಥಿಗಳಿಲ್ಲ, ಜೆಡಿಎಸ್ ಬಿಟ್ಟರೆ ಗತಿ ಇಲ್ಲ ನಿಮ್ಮ ಯೋಗ್ಯತೆಗೆ. ನಮ್ಮವರನ್ನು ಹೈಜಾಕ್ ಮಾಡಿ ಅವರಿಗೆ ಟಿಕೆಟ್ ಆಮಿಷ ತೋರಿಸಿ ಮೂಲ ಕಾಂಗ್ರೆಸ್ಸಿಗರನ್ನು ಮೂಲೆಗೆ ತಳ್ಳುವ ನಿಮ್ಮ ಕಂತ್ರಿ ರಾಜಕೀಯ ಎಲ್ಲರಿಗೂ ಗೊತ್ತಿದೆ ಎಂದು ಕಿಡಿಕಾರಿದ್ದಾರೆ.

ಅಕ್ಕಪಕ್ಕದವರ ತಟ್ಟೆಯಲ್ಲಿರುವುದನ್ನು ಎಗರಿಸುವುದು ಸಿದ್ಧಾಂತವೇ? ಆಪರೇಷನ್ ಹಸ್ತವೂ ಸಿದ್ಧಾಂತವೇ? ಆಶ್ರಯ ಕೊಟ್ಟ ಪಕ್ಷವನ್ನು ಅಲ್ಲಿನ ಮೂಲ ನಿವಾಸಿಗಳನ್ನು ಮುಗಿಸುವುದೇ ಸಿದ್ಧಾಂತವೇ? ನೀವು ಜೆಡಿಎಸ್ ಸಿದ್ಧಾಂತದ ಬಗ್ಗೆ ಮಾತನಾಡುತ್ತೀರಿ? ನಾಚಿಕೆಯಾಗಬೇಕು. ಸುಳ್ಳು ನಿಮ್ಮ ರಾಜಕೀಯದ ಅಡಿಪಾಯ. ಸುಳ್ಳೇ ನಿಮ್ಮ ರಾಜಕೀಯ ಅಸ್ತಿತ್ವದ ಪ್ರತಿರೂಪ. ಸುಳ್ಳು ಸುಳ್ಳೇ ನಿಮ್ಮ ನರಿ ಬುದ್ಧಿ ಅವಕಾಶವಾದಿ ರಾಜಕಾರಣ ನಿಜಸ್ವರೂಪ ಎಂದು ವಾಗ್ದಾಳಿ ನಡೆಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...