ಶಿವಮೊಗ್ಗ ನಗರದ ಗುಡ್ಡೇಕಲ್ ನಲ್ಲಿರುವ ಬಾಲಸುಬ್ರಹ್ಮಣ್ಯ ಸ್ವಾಮಿಯ ಆಡಿಕೃತ್ತಿಕೆ ಹರೋಹರ ಜಾತ್ರೆಯನ್ನು ಜುಲೈ 22 ಮತ್ತು 23 ರಂದು ದೇವಸ್ಥಾನ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಎಂ. ರಾಜು ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ಕೊರೊನಾದಿಂದಾಗಿ ಕಳೆದ ಎರಡು ವರ್ಷಗಳಿಂದ ಜಾತ್ರೆ ಮಾಡಿರಲಿಲ್ಲ. ಈ ವರ್ಷವೂ ಜಾತ್ರೆ ಇದೆಯೋ ಇಲ್ಲವೋ ಎಂಬ ಬಗ್ಗೆ ಅನೇಕರು ಕೇಳುತ್ತಿದ್ದಾರೆ. ಭಕ್ತರ ಇಚ್ಛೆ ಹಾಗೂ ಇದುವರೆಗೂ ನಡೆದುಕೊಂಡು ಬಂದ ಸಂಪ್ರದಾಯದಂತೆ ಸಾಂಪ್ರದಾಯಿಕವಾಗಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ ಎಂದರು.
ಹೊರ ಜಿಲ್ಲೆಗಳಿಂದ ಮಾತ್ರ ವಲ್ಲದೆ ಹೊರ ರಾಜ್ಯದಿಂದಲೂ ಭಕ್ತರು ಇಲ್ಲಿಗೆ ಬಂದು ಹರಕೆ ತೀರಿಸುತ್ತಾರೆ. ಈ ಬಾರಿಯೂ ಕೂಡ ಅದಕ್ಕೆ ಎಲ್ಲಾ ವ್ಯವಸ್ಥೆ ಮಾಡಲಾಗುತ್ತದೆ. ಪ್ರತೀ ವರ್ಷದಂತೆ ಭಕ್ತರು ಜಾತ್ರೆಯಲ್ಲಿ ಪಾಲ್ಗೊಳ್ಳಬಹುದಾಗಿದೆ ಎಂದು ಹೇಳಿದರು.
ಆಷಾಢ ಅಥವಾ ಶ್ರಾವಣ ಮಾಸದಲ್ಲಿ ಕೃತ್ತಿಕೆ ದಿನದಂದು ಎರಡು ದಿನ ಈ ಉತ್ಸವ ಆಚರಿಸಲಾಗುತ್ತದೆ. ಮೊದಲನೆಯ ದಿನ ಭರಣಿ ಕಾವಡಿ ಅಂತಲೂ, ಎರಡನೆಯ ದಿನವನ್ನು ಅಡಿ ಕೃತ್ತಿಕೆ ಅಂತಲೂ ಆಚರಿಸಲಾಗುತ್ತದೆ. ದೇವಸ್ಥಾನದ ಮುಂಭಾಗದ ರಸ್ತೆಯಲ್ಲಿ ರೈಲ್ವೆ ಮೇಲ್ಸೇತುವೆ ಕೆಲಸ ನಡೆಯುತ್ತಿರುವುದರಿಂದ ಭಕ್ತರಿಗೆ ಅಡಚಣೆಯಾಗುವ ಸಾಧ್ಯತೆ ಇದೆ ಎಂದರು.
ತಮಿಳುನಾಡಿನಿಂದ ಇಲ್ಲಿಗೆ ಕೆಲಸಕ್ಕೆ ಬಂದಿದ್ದ ಮಹಿಳೆಯೊಬ್ಬರು 80 ವರ್ಷಗಳ ಹಿಂದೆ ಈ ಸ್ಥಳದಲ್ಲಿ ಸಣ್ಣದಾದ ವಿಗ್ರಹ ಸ್ಥಾಪಿಸಿ ಪೂಜೆ ಮಾಡಲು ಆರಂಭಿಸಿದ್ದರು. ಈಗ ದೇವಸ್ಥಾನ ದೊಡ್ಡದಾಗಿದೆ. ಬರುವ ಭಕ್ತರ ಸಂಖ್ಯೆಯೂ ಹೆಚ್ಚಾಗಿದೆ. ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ ಎಂದರು.