ಆನ್‌ಲೈನ್ ಪಾವತಿಗೆ ಸಂಬಂಧಪಟ್ಟಂತೆ ಭಾರತದಾದ್ಯಂತ ಜುಲೈ 1ರಿಂದ ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ನಿಯಮಗಳು ಬದಲಾಗಲಿವೆ. ಯಾಕಂದ್ರೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ಟೋಕನೈಸೇಶನ್ ನಿಯಮವನ್ನು ಜಾರಿಗೆ ತರುತ್ತಿದೆ. ಟೋಕನೀಕರಣವಾದ್ರೆ ಆನ್‌ಲೈನ್ ವಹಿವಾಟಿನಲ್ಲಿ ಗೌಪ್ಯತೆಯನ್ನು ರಕ್ಷಿಸಬಹುದು. ವ್ಯಾಪಾರಿಗಳು ಗ್ರಾಹಕರ ಡೇಟಾವನ್ನು ತಮ್ಮ ಸರ್ವರ್‌ಗಳಲ್ಲಿ ಸಂಗ್ರಹಿಸಲು ಸಾಧ್ಯವಾಗುವುದಿಲ್ಲ.
ಇದು ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಸಂಖ್ಯೆ, CVV, ಕಾರ್ಡ್ ಮುಕ್ತಾಯ ದಿನಾಂಕ ಮತ್ತು ಇತರ ಸೂಕ್ಷ್ಮ ಮಾಹಿತಿಯನ್ನು ಒಳಗೊಂಡಿರುತ್ತದೆ. ದೇಶೀಯ ಆನ್‌ಲೈನ್ ಖರೀದಿಗಳಿಗೆ ಅನ್ವಯವಾಗುವ ಕಾರ್ಡ್-ಆನ್-ಫೈಲ್ (CoF) ಟೋಕನೈಸೇಶನ್ ಅಳವಡಿಕೆಯನ್ನು ಆರ್‌ಬಿಐ ಕಡ್ಡಾಯಗೊಳಿಸಿದೆ. ದೇಶದಾದ್ಯಂತ ಕಾರ್ಡ್ ಟೋಕನೀಕರಣ ಮಾಡಲು ಜನವರಿ 1 ರಿಂದ ಜುಲೈ 1ರವರೆಗೆ ಸಮಯಾವಕಾಶ ನೀಡಲಾಗಿದೆ.
ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಟೋಕನೈಸೇಶನ್ ಎಂದರೇನು?
ನೀವು ಮಾಡುವ ಪಾವತಿಗಳನ್ನು ಸುರಕ್ಷಿತವಾಗಿಡುವುದೇ ಟೋಕನೈಸೇಶನ್ ಉದ್ದೇಶ, ನಿಮ್ಮ ಕಾರ್ಡ್‌ಗಳನ್ನು ‘ಟೋಕನೈಸ್’ ಮಾಡಲು ಆನ್‌ಲೈನ್ ವ್ಯಾಪಾರಿಗಳು ಮತ್ತು ಬ್ಯಾಂಕ್‌ಗಳಿಂದ ನಿಮಗೆ ನೋಟಿಫಿಕೇಶನ್ ಕೂಡ ಬಂದಿರಬಹುದು. ಆರ್‌ಬಿಐ ವೆಬ್‌ಸೈಟ್ ಪ್ರಕಾರ, “ಟೋಕನೈಸೇಶನ್ ಎಂಬುದು ನಿಜವಾದ ಕಾರ್ಡ್ ವಿವರಗಳನ್ನು “ಟೋಕನ್” ಎಂದು ಕರೆಯಲಾಗುವ ಪರ್ಯಾಯ ಕೋಡ್‌ನೊಂದಿಗೆ ಬದಲಾಯಿಸುವುದನ್ನು ಸೂಚಿಸುತ್ತದೆ. ಕೆಲವು ಸರಳ ಪ್ರಕ್ರಿಯೆಯ ಮೂಲಕ ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ಟೋಕನೈಸೇಶನ್ ಮಾಡಬಹುದು.
1: ಆಹಾರ, ದಿನಸಿ ಅಥವಾ ಬಟ್ಟೆ ಸೇರಿದಂತೆ ಇತರ ವಸ್ತುಗಳನ್ನು ಖರೀದಿಸಲು ನಿಮ್ಮ ಮೆಚ್ಚಿನ ಅಥವಾ ಹೆಚ್ಚಾಗಿ ಬಳಸುವ ಆನ್‌ಲೈನ್ ವೆಬ್‌ಸೈಟ್ ಅಥವಾ ಮೊಬೈಲ್ ಅಪ್ಲಿಕೇಶನ್‌ಗೆ ಹೋಗಿ ಮತ್ತು ವ್ಯವಹಾರವನ್ನು ಪ್ರಾರಂಭಿಸಿ.
2: ಕೊನೆಯಲ್ಲಿ ಚೆಕೌಟ್ ಆಪ್ಷನ್ ಬಂದಾಗ ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಪಾವತಿ ಆಯ್ಕೆಯನ್ನು ಆಯ್ಕೆಮಾಡಿ. ಈಗ CVV ವಿವರಗಳನ್ನು ಒದಗಿಸಿ.
3: ನಿಮ್ಮ ಕಾರ್ಡ್ ಅನ್ನು ಸುರಕ್ಷಿತಗೊಳಿಸಿ ಅಥವಾ RBI ಮಾರ್ಗಸೂಚಿಗಳ ಪ್ರಕಾರ ಕಾರ್ಡ್ ಉಳಿಸಿ ಎಂದು ಹೇಳುವ ಆಯ್ಕೆಯನ್ನು ಕ್ಲಿಕ್ ಮಾಡಿ.
4: ಸೇವ್ ಮೇಲೆ ಕ್ಲಿಕ್ ಮಾಡಿ ಮತ್ತು ನಿಮ್ಮ ಮೊಬೈಲ್ ಸಂಖ್ಯೆಗೆ ಬಂದ OTP ಅನ್ನು ನಮೂದಿಸಿ.
5: ನಿಮ್ಮ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಅನ್ನು ಇದೀಗ ಯಶಸ್ವಿಯಾಗಿ ಟೋಕನೈಸ್ ಮಾಡಲಾಗಿದೆ ಮತ್ತು ಅದು ಸುರಕ್ಷಿತವಾಗಿದೆ. ಇನ್ನು ಮುಂದೆ ನಿಮ್ಮ ಕಾರ್ಡ್‌ಗೆ ಸಂಬಂಧಪಟ್ಟ ಮಾಹಿತಿ ಮತ್ತು ವಿವರಗಳನ್ನು ಪಡೆಯಲು ವ್ಯಾಪಾರಿಗಳಿಗೆ ಸಾಧ್ಯವಾಗುವುದಿಲ್ಲ.
ನಿಮ್ಮ ಕಾರ್ಡ್ ಅನ್ನು ನೀವು ಟೋಕನೈಸ್ ಮಾಡದಿದ್ದರೆ ಏನಾಗುತ್ತದೆ?
ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ಟೋಕನೈಸೇಶನ್ ಪ್ರಕ್ರಿಯೆಯು ಕಡ್ಡಾಯವಲ್ಲ. ಗ್ರಾಹಕರು ತಮ್ಮ ಕಾರ್ಡ್ ಅನ್ನು ಟೋಕನೈಸ್ ಮಾಡಬೇಕೇ ಬೇಡವೇ ಎಂಬುದನ್ನು ಆಯ್ಕೆ ಮಾಡಬಹುದು. ಆ ಸಂದರ್ಭದಲ್ಲಿ, ಗ್ರಾಹಕರು ಆನ್‌ಲೈನ್‌ನಲ್ಲಿ ಏನನ್ನಾದರೂ ಖರೀದಿಸುವಾಗ ಎಲ್ಲಾ ಕಾರ್ಡ್ ವಿವರಗಳನ್ನು ಮರು-ನಮೂದಿಸಬೇಕಾಗುತ್ತದೆ.
ಟೋಕನೈಸೇಶನ್ ವ್ಯವಸ್ಥೆಯು ಸಂಪೂರ್ಣವಾಗಿ ಉಚಿತವಾಗಿದೆ ಮತ್ತು ಕಡ್ಡಾಯವಲ್ಲ. ಆದಾಗ್ಯೂ, ಇದು ನಿಮ್ಮ ಡೇಟಾವನ್ನು ಸುರಕ್ಷಿತಗೊಳಿಸುವಾಗ ಸುಗಮ ಪಾವತಿ ಅನುಭವವನ್ನು ನೀಡುತ್ತದೆ. ಟೋಕನೈಸೇಶನ್ ದೇಶೀಯ ಆನ್‌ಲೈನ್ ವಹಿವಾಟುಗಳಿಗೆ ಮಾತ್ರ ಅನ್ವಯಿಸುತ್ತದೆ. ಟೋಕನೈಸೇಶನ್ ವಿನಂತಿಯ ನೋಂದಣಿಯನ್ನು ಹೆಚ್ಚುವರಿ ಅಂಶದ ದೃಢೀಕರಣದ (AFA) ಮೂಲಕ ಸ್ಪಷ್ಟ ಗ್ರಾಹಕರ ಒಪ್ಪಿಗೆಯೊಂದಿಗೆ ಮಾತ್ರ ಮಾಡಲಾಗುತ್ತದೆ ಮತ್ತು RBI ಪ್ರಕಾರ ಚೆಕ್ ಬಾಕ್ಸ್, ರೇಡಿಯೋ ಬಟನ್ ಇತ್ಯಾದಿಗಳ ಬಲವಂತದ / ಡೀಫಾಲ್ಟ್ / ಸ್ವಯಂಚಾಲಿತ ಆಯ್ಕೆಯ ಮೂಲಕ ಅಲ್ಲ. ಬಳಕೆಯ ಸಂದರ್ಭವನ್ನು ಆಯ್ಕೆ ಮಾಡುವ ಮತ್ತು ಮಿತಿಗಳನ್ನು ಹೊಂದಿಸುವ ಆಯ್ಕೆಯನ್ನು ಗ್ರಾಹಕರಿಗೆ ನೀಡಲಾಗುವುದು.