ಪರಿಸರ ಹಾಗೂ ಆರೋಗ್ಯಕ್ಕೆ ಅತ್ಯಂತ ಹಾನಿಕಾರಕವಾದ ಪ್ಲಾಸ್ಟಿಕ್ ನಿಷೇಧ ಮಾಡುವ ಪ್ರಯತ್ನ ಭಾರತದಲ್ಲಿ ನಡೆಯುತ್ತಲೇ ಇದೆ. ಕಡಿಮೆ ಉಪಯುಕ್ತತೆ ಮತ್ತು ಹೆಚ್ಚಿನ ಕಸ ಸೃಷ್ಟಿ ಮಾಡುವ ಏಕ-ಬಳಕೆಯ ಪ್ಲಾಸ್ಟಿಕ್ ವಸ್ತುಗಳ ತಯಾರಿಕೆ, ಆಮದು, ದಾಸ್ತಾನು, ವಿತರಣೆ, ಮಾರಾಟ ಮತ್ತು ಬಳಕೆಯನ್ನು ಭಾರತದಲ್ಲಿ ಜುಲೈ 1 ರಿಂದ ನಿಷೇಧಿಸಲಾಗ್ತಿದೆ. ದೇಶಾದ್ಯಂತ ನಿಷೇಧ ಆದೇಶ ಜಾರಿಯಾಗಲಿದೆ ಎಂದು ಪರಿಸರ ಸಚಿವಾಲಯ, ಅರಣ್ಯ ಮತ್ತು ಹವಾಮಾನ ಬದಲಾವಣೆ ಇಲಾಖೆ ತಿಳಿಸಿದೆ.
ಜುಲೈ ತಿಂಗಳಿನಿಂದ ಯಾವ್ಯಾವ ಪ್ಲಾಸ್ಟಿಕ್ ವಸ್ತುಗಳನ್ನು ನಿಷೇಧಿಸಲಾಗ್ತಿದೆ ಎಂಬುದರ ಪಟ್ಟಿಯನ್ನೂ ನೀಡಿದೆ. ಪಾಲಿಸ್ಟೈರೀನ್ ಮತ್ತು ವಿಸ್ತರಿತ ಪಾಲಿಸ್ಟೈರೀನ್ ಕೂಡ ಇವುಗಳಲ್ಲಿ ಸೇರಿದೆ.
ಜುಲೈ 1 ರಿಂದ ನಿಷೇಧಿತ ವಸ್ತುಗಳು:
ಬಲೂನ್ ತುಂಡು
ಸಿಗರೇಟ್ ಪ್ಯಾಕ್
ಪ್ಲೇಟ್, ಕಪ್, ಗ್ಲಾಸ್, ಫೋರ್ಕ್, ಚಮಚ, ಚಾಕು, ಟ್ರೇ ಸೇರಿದಂತೆ ಕಟ್ಲರಿ ವಸ್ತುಗಳು
ಇಯರ್‌ಬಡ್ಸ್
ಸ್ವೀಟ್ ಬಾಕ್ಸ್
ಇನ್ವಿಟೇಶನ್ ಕಾರ್ಡ್ಸ್
100 ಮೈಕ್ರಾನ್‌ಗಿಂತ ಕಡಿಮೆ ಅಳತೆಯ PVC ಬ್ಯಾನರ್
ಜುಲೈನಿಂದ ಪ್ಲಾಸ್ಟಿಕ್ ನಿಷೇಧ ಜಾರಿ ಹೇಗೆ ?
ಏಕ-ಬಳಕೆಯ ಪ್ಲಾಸ್ಟಿಕ್ ನಿಷೇಧವನ್ನು CPCB ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳು ಮೇಲ್ವಿಚಾರಣೆ ಮಾಡುತ್ತವೆ. ನಿಯಮಿತವಾಗಿ ಕೇಂದ್ರಕ್ಕೆ ವರದಿ ಮಾಡುತ್ತವೆ. ನಿಷೇಧಿತ ವಸ್ತುಗಳ ಮಾರಾಟ ಅಥವಾ ವಿತರಣೆಯಲ್ಲಿ ತೊಡಗಿರುವ ಕೈಗಾರಿಕೆಗಳಿಗೆ ಕಚ್ಚಾ ವಸ್ತುಗಳನ್ನು ಪೂರೈಸದಂತೆ ರಾಷ್ಟ್ರೀಯ, ರಾಜ್ಯ ಮತ್ತು ಸ್ಥಳೀಯ ಮಟ್ಟದಲ್ಲಿ CPCB ನಿರ್ದೇಶನ ನೀಡಿದೆ.
ಎಸ್‌ಯುಪಿ ವಸ್ತುಗಳನ್ನು ತಮ್ಮ ಆವರಣದಲ್ಲಿ ಮಾರಾಟ ಮಾಡಬಾರದು ಎಂಬ ಷರತ್ತಿನೊಂದಿಗೆ ತಾಜಾ ವಾಣಿಜ್ಯ ಪರವಾನಗಿಗಳನ್ನು ನೀಡಲು CPCB ಸ್ಥಳೀಯ ಅಧಿಕಾರಿಗಳಿಗೆ ಆದೇಶಿಸಿದೆ. ಅದಕ್ಕಿಂತ ಮುಖ್ಯವಾಗಿ, ನಿಷೇಧಿತ ವಸ್ತುಗಳನ್ನು ಮಾರಾಟ ಮಾಡುವುದು ಕಂಡುಬಂದರೆ ಈಗಿರುವ ವಾಣಿಜ್ಯ ಪರವಾನಗಿಗಳನ್ನು ರದ್ದುಗೊಳಿಸಲಾಗುತ್ತದೆ.
ಏಕ ಬಳಕೆಯ ಪ್ಲಾಸ್ಟಿಕ್ ಎಂದರೇನು ?
ಏಕ ಬಳಕೆಯ ಪ್ಲಾಸ್ಟಿಕ್ ಎಂದರೆ ಒಮ್ಮೆ ಬಳಸಿ ಬಿಸಾಡುವ ಪ್ಲಾಸ್ಟಿಕ್ ಎಂದರ್ಥ. ಏಕ-ಬಳಕೆಯ ಪ್ಲಾಸ್ಟಿಕ್‌ನ ತಯಾರಿಕೆ ಮತ್ತು ಬಳಕೆಯ ಪ್ರಮಾಣ ಅತ್ಯಂತ ಹೆಚ್ಚಾಗಿದೆ. ವಸ್ತುಗಳ ಪ್ಯಾಕೇಜಿಂಗ್, ಬಾಟಲಿಗಳು, ಮಾಸ್ಕ್, ಪಾಲಿಥಿನ್ ಚೀಲಗಳು, ಅಂಟಿಕೊಳ್ಳುವ ಫಿಲ್ಮ್, ಕಾಫಿ ಕಪ್‌ಗಳು, ಆಹಾರ ಪ್ಯಾಕೇಜಿಂಗ್ ಮತ್ತು ಕಸದ ಚೀಲಗಳು ಇತ್ಯಾದಿ.
2021 ರಲ್ಲಿ ಪ್ರಕಟವಾದ ವರದಿಯ ಪ್ರಕಾರ, ಏಕ ಬಳಕೆಯ ಪ್ಲಾಸ್ಟಿಕ್‌ಗಳು ಜಾಗತಿಕವಾಗಿ ಉತ್ಪಾದನೆಯಾಗುವ ಎಲ್ಲಾ ಪ್ಲಾಸ್ಟಿಕ್‌ಗಳಲ್ಲಿ ಮೂರನೇ ಒಂದು ಭಾಗವನ್ನು ಹೊಂದಿದೆ, ಇವುಗಳಲ್ಲಿ ಶೇ.98ರಷ್ಟನ್ನು ಇಂಧನಗಳ ಪಳೆಯುಳಿಕೆಗಳಿಂದ ತಯಾರಿಸಲಾಗುತ್ತದೆ. 2019 ರಲ್ಲಿ ಜಾಗತಿಕವಾಗಿ 130 ಮಿಲಿಯನ್ ಮೆಟ್ರಿಕ್ ಟನ್‌ಗಳಷ್ಟು ಪ್ಲಾಸ್ಟಿಕ್ ಅನ್ನು ತಿರಸ್ಕರಿಸಲಾಗಿತ್ತು.
ಇದರಲ್ಲಿ ಬಹುಪಾಲು ಸಿಂಗಲ್ ಯೂಸ್ ಪ್ಲಾಸ್ಟಿಕ್‌ನದ್ದೇ ಎಂಬುದು ಗಮನಾರ್ಹ ಸಂಗತಿ. ಅತಿ ಹೆಚ್ಚಿನ ಪ್ರಮಾಣದಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾದನೆ ಮಾಡ್ತಿರೋ 100 ಅಗ್ರ ದೇಶಗಳಲ್ಲಿ ಭಾರತವು 94 ನೇ ಸ್ಥಾನದಲ್ಲಿದೆ. ಸಿಂಗಾಪುರ, ಆಸ್ಟ್ರೇಲಿಯಾ ಮತ್ತು ಓಮನ್ ಮೊದಲ ಮೂರು ಸ್ಥಾನದಲ್ಲಿವೆ.