ಜೀವಾವಧಿ ಶಿಕ್ಷೆಗೊಳಗಾಗಿ ಕಂಬಿ ಎಣಿಸುತ್ತಿದ್ದ ಅಪರಾಧಿಯನ್ನು ನ್ಯಾಯಾಧೀಶರು ಚುಂಬಿಸುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಭಾರಿ ವೈರಲ್ ಆಗಿದೆ. ಜೊತೆಗೆ ಸಾಕಷ್ಟು ಟೀಕೆಗಳು ಕೇಳಿಬಂದಿವೆ
ಅರ್ಜೆಂಟೀನಾದಲ್ಲಿ ನಡೆದ ಘಟನೆ ಇದಾಗಿದ್ದು, ನ್ಯಾಯಾಧೀಶರು ಜೀವಾವಧಿ ಶಿಕ್ಷೆಗೊಳಗಾಗಿದ್ದ ಆರೋಪಿಯನ್ನು ಜೈಲಿನಲ್ಲೇ ಚುಂಬಿಸಿದ್ದಾರೆ.
ಸೋರಿಕೆಯಾದ ವಿಡಿಯೋದಲ್ಲಿ ಚುಬುಟ್ ಪ್ರಾಂತ್ಯದ ನ್ಯಾಯಾಧೀಶರಾದ ಮೇರಿಯಲ್ ಸೌರೆಜ್ ಎಂದು ಗುರುತಿಸಲಾಗಿದೆ. ಅವರು ಡಿಸೆಂಬರ್ 29 ರ ಮಧ್ಯಾಹ್ನ ಟ್ರೆಲ್ಯೂ ನಗರದ ಜೈಲಿನಲ್ಲಿ ಕ್ರಿಶ್ಚಿಯನ್ ಮಾಯ್ ಬುಸ್ಟೋಸ್ ಅವರನ್ನು ಚುಂಬಿಸುತ್ತಿರುವ ವಿಡಿಯೋ ವೈರಲ್ ಆಗಿದೆ.
ಶಿಕ್ಷೆಗೊಳಗಾದ ಖೈದಿಯೊಂದಿಗೆ ನ್ಯಾಯಾಧೀಶರು ಆಲಿಂಗನ ಮಾಡಿರುವುದನ್ನು ವಿಡಿಯೋದಲ್ಲಿ ನೋಡಬಹುದು. 2009ರಲ್ಲಿ ಪೊಲೀಸ್ ಅಧಿಕಾರಿ ಲಿಯಾಂಡ್ರೊ ಟಿಟೊ ರಾಬರ್ಟ್ಸ್ ಅವರನ್ನು ಅಪರಾಧಿ ಬುಸ್ಟೋಸ್ ಹತ್ಯೆಗೈದಿದ್ದ. ಈತನಿಗೆ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿತ್ತು. ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಮೂವರು ನ್ಯಾಯಾಧೀಶರಲ್ಲಿ ಸೌರೆಜ್ ಕೂಡ ಒಬ್ಬರು.
ಪೊಲೀಸ್ ಅಧಿಕಾರಿಯ ಹತ್ಯೆಯ ನಂತರ ಸಿಕ್ಕಿಬಿದ್ದ ಬುಸ್ಟೋಸ್ಟ್, ವಿಚಾರಣೆಯ ಸಮಯದಲ್ಲಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದ. ಹೀಗಾಗಿ ಆತನಿಗೆ ಕೋರ್ಟ್ ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು.
ಇದೀಗ ಜಡ್ಜ್ ಅಪರಾಧಿಗೆ ಚುಂಬನ ಮಾಡಿರುವ ವಿಡಿಯೋ ವೈರಲ್ ಆದ ನಂತರ ಸ್ಪಷ್ಟನೆ ನೀಡಿರುವ ಅವರು, ತನಗೂ ಅಪರಾಧಿಗೂ ಯಾವುದೇ ಭಾವನಾತ್ಮಕ ಸಂಬಂಧವಿಲ್ಲ ಎಂದು ಹೇಳಿದ್ದಾರೆ.
ಪ್ರಕರಣದ ಬಗ್ಗೆ ಪುಸ್ತಕ ಬರೆಯುತ್ತಿರುವುದರಿಂದ ಆರೋಪಿಯನ್ನು ಭೇಟಿ ಮಾಡಲು ಜೈಲಿಗೆ ಹೋಗಿದ್ದಾಗಿ ತಿಳಿಸಿದ್ದಾರೆ. ಆದರೆ, ಆತನಿಗೆ ಚುಂಬನ ಮಾಡಿಲ್ಲ, ಸರಿಯಾಗಿ ಕೇಳಿಸದ್ದರಿಂದ ಹತ್ತಿರದಿಂದ ಮಾತನಾಡಿದ್ದಾಗಿ ಅವರು ಹೇಳಿದ್ದಾರೆ.
ಇನ್ನು ನ್ಯಾಯಾಧೀಶರ ಈ ವರ್ತನೆಗೆ ಚುಬುಟ್‌ನ ಸುಪೀರಿಯರ್ ಕೋರ್ಟ್ ಅಸಮಾಧಾನ ಹೊರಹಾಕಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಕೋರ್ಟ್ ಆದೇಶಿಸಿದೆ.
https://www.youtube.com/watch?v=AYmxDeX9xBo