ಬಾಳೆಹಣ್ಣಿನ ಸೇವನೆಯಿಂದ ಮಲಬದ್ಧತೆ ಸಮಸ್ಯೆ ದೂರ ಮಾಡಬಹುದು ಎಂಬುದು ನಿಮಗೆಲ್ಲರಿಗೂ ಗೊತ್ತು. ಆದರೆ ಬೇಧಿಗೂ ಇದು ಅತ್ಯುತ್ತಮ ಮನೆಮದ್ದು ಎಂಬುದು ನಿಮಗೆ ಗೊತ್ತೇ…?
ನಾರಿನಂಶ ಹೇರಳವಾಗಿರುವ ಇದು ದೇಹದಲ್ಲಿ ಸಂಗ್ರಹವಾಗಿರುವ ಅನಾವಶ್ಯಕ ಕಲ್ಮಶಗಳನ್ನು ಸರಾಗವಾಗಿ ಹೊರಹಾಕುತ್ತದೆ. ಜೀರ್ಣಕ್ರಿಯೆಯನ್ನು ಸಕ್ರಿಯಗೊಳಿಸಿ ಶರೀರಕ್ಕೆ ಚೈತನ್ಯ ಒದಗಿಸುತ್ತದೆ.
ಇದರಲ್ಲಿರುವ ಸಕ್ಕರೆ ಮತ್ತು ಸೋಡಿಯಂ ಸಮ್ಮಿಶ್ರಣದಿಂದ ಬೇಧಿಯನ್ನು ನಿಯಂತ್ರಿಸುತ್ತವೆ. ಕರುಳನ್ನು ಸ್ವಚ್ಛಗೊಳಿಸುತ್ತವೆ. ಬೇಧಿಯಾದ ಬಳಿಕ ದೇಹ ನಿರ್ಜಲೀಕರಣದಿಂದ ಬಳಲುವುದನ್ನೂ ಕಡಿಮೆ ಮಾಡುತ್ತದೆ.
ದೇಹಕ್ಕೆ ವಿಪರೀತ ಸುಸ್ತಾದಾಗ ತಂಪು ಪಾನೀಯಗಳನ್ನು ಸೇವಿಸುತ್ತೇವೆ. ಅದರ ಬದಲು ಹಸಿರು ಬಣ್ಣದ ಉದ್ದನೆಯ ಎರಡು ಬಾಳೆಹಣ್ಣುಗಳನ್ನು ತಿಂದರೆ ನಿಮ್ಮ ದೇಹಕ್ಕೆ ಅಗತ್ಯವಾದ ಶಕ್ತಿ ಕ್ಷಣಾರ್ಧದಲ್ಲಿ ಪೂರೈಕೆಯಾಗುತ್ತದೆ.
ಬಾಳೆಹಣ್ಣಿನೊಂದಿಗೆ ಚಿಟಿಕೆ ಉಪ್ಪು ಬೆರೆಸಿ ಸೇವಿಸಿದರೆ ಬೇಧಿಯಿಂದ ದೇಹ ಕಳೆದುಕೊಂಡ ಶಕ್ತಿ ಮತ್ತೆ ದೊರೆಯುತ್ತದೆ. ಆದರೆ ನೆನಪಿರಲಿ, ಸರಿಯಾಗಿ ಬಲಿತ ಹಣ್ಣನ್ನೇ ಆಯ್ದುಕೊಳ್ಳಿ, ಇಲ್ಲವಾದರೆ ನಿಮ್ಮ ಸಮಸ್ಯೆ ಉಲ್ಬಣಗೊಳ್ಳಬಹುದು.