
ಭರ್ಜರಿ ಊಟವಾದ ಬಳಿಕ ಹೊಟ್ಟೆ ಭಾರ ಎನಿಸುವುದು ಸಹಜ. ಅದರಲ್ಲೂ ಮದುವೆ ಮನೆಯ ಊಟವಾದ ಬಳಿಕವಂತೂ ಕೇಳುವುದೇ ಬೇಡ, ಸಿಕ್ಕಿದ್ದೆಲ್ಲಾ ತಿಂದು ಹೊಟ್ಟೆ ಉಬ್ಬರಿಸುತ್ತದೆ. ಆಗ ಏನು ಮಾಡಬಹುದು ಗೊತ್ತೇ?
ಹೊಟ್ಟೆ ತುಂಬಾ ತಿಂದು ಉಂಟಾಗುವ ಅಸಿಡಿಟಿ ಅಥವಾ ಅಜೀರ್ಣ ಸಮಸ್ಯೆಗಳಿಗೆ ಉತ್ತಮ ಮನೆಮದ್ದು ಎಂದರೆ ಜೀರಾ ನೀರು. ಎರಡು ಲೋಟ ನೀರಿಗೆ ಮೂರು ಚಮಚ ಜೀರಿಗೆ ಹಾಕಿ ಕುದಿಸಿ. ಹತ್ತು ನಿಮಿಷ ಕುದಿದ ಬಳಿಕ ಕೆಳಗಿಡಿ. ಇದಕ್ಕೆ ಜಜ್ಜಿ ಇಟ್ಟುಕೊಂಡ ಪುದೀನಾ ಸೊಪ್ಪು ಹಾಕಿ.
ರುಚಿಗೆ ಉಪ್ಪು, ಚಿಟಿಕೆ ಕಾಳು ಮೆಣಸಿನ ಪುಡಿ, ಲಿಂಬೆ ರಸ, ಸಕ್ಕರೆ ಅಥವಾ ಜೇನು ಸೇರಿಸಿ. ಸೋಡಾ ಬೆರೆಸಿ ಬೇಕಿದ್ದರೆ ಸ್ವಲ್ಪ ಐಸ್ ಸೇರಿಸಿ. ಇದನ್ನು ದಿನಕ್ಕೆ ಎರಡರಿಂದ ಮೂರು ಬಾರಿ ಕುಡಿಯುವುದರಿಂದ ಅಜೀರ್ಣ ಸಮಸ್ಯೆ ದೂರವಾಗುತ್ತದೆ.
ಅಸಿಡಿಟಿ ಸಮಸ್ಯೆ ಹೊಂದಿರುವವರೂ ಇದನ್ನು ಕುಡಿಯಬಹುದು. ಇದಕ್ಕೆ ಉಷ್ಣ ಸಂಬಂಧಿ ಸಮಸ್ಯೆಯನ್ನು ಕಡಿಮೆ ಮಾಡುವ ಗುಣವೂ ಇದೆ. ಹಾಗಾಗಿ ಯಾವುದೇ ಅಡ್ಡ ಪರಿಣಾಮ ಇಲ್ಲದ ಇದನ್ನು ಎಲ್ಲರೂ ಕುಡಿಯಬಹುದು. ರುಚಿ ಬಯಸುವವರು ಸೋಡಾ ಸೇರಿಸಿ ಕುಡಿಯಬಹುದು.