ಇತ್ತೀಚಿನ ದಿನಗಳಲ್ಲಿ ಜಿಮ್‌ಗೆ ಹೋಗೋದು, ವರ್ಕೌಟ್ ಮಾಡೋದು ಒಂಥರಾ ಪ್ರತಿಷ್ಠೆಯಾಗಿ ಬದಲಾಗಿಬಿಟ್ಟಿದೆ. ಜಿಮ್‌ನಲ್ಲಿ ಪ್ರತಿದಿನ ಬೆವರು ಸುರಿಸಲು ನಮ್ಮ ಮನಸ್ಸು ಕೂಡ ದೃಢವಾಗಿರಬೇಕು. ತಪ್ಪದೇ ದೇಹವನ್ನು ದಂಡಿಸಲು, ಫಿಟ್ ಆಗಿರಬೇಕು ಎಂಬ ಮನಸ್ಥಿತಿಯನ್ನು ಗಟ್ಟಿಯಾಗಿಸಿಕೊಳ್ಳುವುದು ಸುಲಭವಲ್ಲ.
ಜಿಮ್‌ನಲ್ಲಿ ದೃಢಚಿತ್ತಕ್ಕೆ ಬೇಕಾದಂತಹ ಪರಿಸರವೇ ನಿರ್ಮಾಣವಾಗಿದ್ದರೆ ಹೇಗಿರತ್ತೆ ಹೇಳಿ? ಅಂಥದ್ದೇ ಫೋಟೋ ಒಂದು ಈಗ ವೈರಲ್ ಆಗಿದೆ. ಜಿಮ್ ಮಾಲೀಕ ಜಿಮ್‌ನೊಳಗೆ ವಿಶಿಷ್ಟವಾದ ಶಿವಲಿಂಗವೊಂದನ್ನು ಪ್ರತಿಷ್ಠಾಪಿಸಿದ್ದಾರೆ.
ವಿಶೇಷ ಅಂದ್ರೆ ಕಸರತ್ತು ಮಾಡುವ ಡಂಬಲ್ಸ್ ಮತ್ತು ವೇಯ್ಟ್ ಲಿಫ್ಟಿಂಗ್ ಪ್ಲೇಟ್‌ಗಳನ್ನೇ ಬಳಸಿ ಶಿವಲಿಂಗವನ್ನು ನಿರ್ಮಾಣ ಮಾಡಲಾಗಿದೆ. ಈ ಜಿಮ್ ಇರೋದು ಗ್ವಾಲಿಯರ್‌ನಲ್ಲಿ. ಜಿಮ್ ಸಾಧನಗಳಿಂದಲೇ ತಯಾರಾಗಿದೆ ದೈತ್ಯ ಶಿವಲಿಂಗ. ದೊಡ್ಡ ದೊಡ್ಡ ಡಂಬೆಲ್ಸ್‌ಗಳಿಂದ ಹಿಡಿದು ಚಿಕ್ಕದಾದ ಸಾಧನಗಳನ್ನು ಕೂಡ ಇದಕ್ಕೆ ಬಳಸಿಕೊಳ್ಳಲಾಗಿದೆ.
ಜಿಮ್‌ನೊಳಗೇ ಸ್ಥಾಪಿಸಿರೋ ಶಿವಲಿಂಗಕ್ಕೆ ಹೂವಿನ ಹಾರವನ್ನು ಅರ್ಪಿಸಿ ಪೂಜೆ ಕೂಡ ಸಲ್ಲಿಸಲಾಗಿದೆ. ಈ ವಿಶಿಷ್ಟವಾದ ಶಿವಲಿಂಗದ ಮೇಲೆ ದೀಪವನ್ನು ಸಹ ಬೆಳಗಿಸಲಾಗಿದೆ. ಈ ಘಟನೆ ತುಂಬಾನೇ ಹಳೆಯದು ಅಂತಾ ಕೆಲವರು ಕಮೆಂಟ್ ಮಾಡ್ತಿದ್ದಾರೆ. ಆದ್ರೆ ಜಾಲತಾಣಗಳಲ್ಲಿ ಇದು ವೈರಲ್ ಆಗ್ತಿದೆ. ಜಿಮ್ ಮಾಲೀಕರ ಸೃಜನಶೀಲತೆಯನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ.