ಇತ್ತೀಚಿನ ದಿನಗಳಲ್ಲಿ ಬೊಜ್ಜಿನ ಸಮಸ್ಯೆ ಸಾಮಾನ್ಯವಾಗಿಬಿಟ್ಟಿದೆ. ಪ್ರತಿಯೊಬ್ಬರೂ ತೂಕ ಇಳಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ಮಾಡ್ತಾರೆ. ಪ್ರತಿದಿನ ಜಿಮ್‌ಗೆ ಹೋಗಿ ಬೆವರಿಳಿಸಲು ಎಲ್ಲರಿಂದಲೂ ಸಾಧ್ಯವಿಲ್ಲ. ಹಾಗಾಗಿ ಪರ್ಯಾಯ ಮಾರ್ಗವನ್ನು ಹುಡುಕಿಕೊಳ್ಳಬೇಕು. ಜಿಮ್‌ಗೆ ಹೋಗದೇ ಕೇವಲ ಒಂದು ವಾರದಲ್ಲಿ ತೂಕ ಕಡಿಮೆ ಮಾಡಿಕೊಳ್ಳೋದು ಹೇಗೆ ಅನ್ನೋದನ್ನು ನೋಡೋಣ.
ಕೆಲವರು ಅಡುಗೆಗೆ ವಿಪರೀತ ಎಣ್ಣೆ ಬಳಸ್ತಾರೆ. ಆದ್ರೆ ತೂಕ ಇಳಿಸಬೇಕೆಂದರೆ ಎಣ್ಣೆಯನ್ನು ಕಡಿಮೆ ಸೇವಿಸಬೇಕು. ಅಡುಗೆ ಮಾಡುವಾಗ ಸಂಸ್ಕರಿಸಿದ ಎಣ್ಣೆಯನ್ನು ಬಳಸಬೇಡಿ. ಅಲ್ಪ ಪ್ರಮಾಣದಲ್ಲಿ ಆಲಿವ್ ಆಯಿಲ್ ಅಥವಾ ತೆಂಗಿನ ಎಣ್ಣೆಯನ್ನು ಬಳಕೆ ಮಾಡಿ. ಕರಿದ ಪದಾರ್ಥಗಳಿಂದ ದೂರವಿರಿ.
ಗ್ರೀನ್ ಟೀ ಕೂಡ ತೂಕವನ್ನು ಕಡಿಮೆ ಮಾಡಲು ಸಹಾಯಕವಾಗಿದೆ. ಇದು ದೇಹದ ಕೊಬ್ಬನ್ನು ಕಡಿಮೆ ಮಾಡುತ್ತದೆ. ನಿಯಮಿತವಾಗಿ ಗ್ರೀನ್ ಟೀ ಕುಡಿಯುತ್ತ ಬಂದರೆ ಹೊಟ್ಟೆಗೆ ಸಂಬಂಧಿಸಿದ ಇತರ ಸಮಸ್ಯೆಗಳು ಕೂಡ ನಿವಾರಣೆಯಾಗುತ್ತವೆ.
ತೂಕ ಇಳಿಸಿಕೊಳ್ಳಲು ಬಯಸಿದರೆ ಸಾಕಷ್ಟು ನೀರು ಕುಡಿಯಿರಿ. ಚೆನ್ನಾಗಿ ನೀರು ಕುಡಿಯುವುದರಿಂದ ದೇಹದಲ್ಲಿರುವ ವಿಷಕಾರಿ ಅಂಶಗಳು ಹೊರಬರುತ್ತವೆ. ಬಿಸಿನೀರನ್ನು ನಿಯಮಿತವಾಗಿ ಕುಡಿಯುತ್ತಾ ಬಂದರೆ ಹೆಚ್ಚುವರಿ ಕೊಬ್ಬು ಸುಲಭವಾಗಿ ಕಡಿಮೆಯಾಗಲು ಪ್ರಾರಂಭಿಸುತ್ತದೆ.
ತೂಕ ಇಳಿಸಿಕೊಳ್ಳಲು 8 ಗಂಟೆಗಳ ಕಾಲ ಚೆನ್ನಾಗಿ ನಿದ್ರೆ ಮಾಡಿ. ಏಕೆಂದರೆ ದೇಹವು ಆರೋಗ್ಯವಾಗಿರಲು ನಿದ್ದೆ ಬಹಳ ಮುಖ್ಯ. ವಾಕಿಂಗ್ ಮೂಲಕವೂ ಬೇಗನೆ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ರಾತ್ರಿಯ ಊಟದ ನಂತರ ಪ್ರತಿದಿನ 30 ನಿಮಿಷಗಳ ಕಾಲ ನಡೆಯಿರಿ. ನಿಯಮಿತವಾಗಿ ವಾಕಿಂಗ್ ಮಾಡುವುದರಿಂದ ದೇಹವೂ ಸದೃಢವಾಗಿರುತ್ತದೆ.