ಆಕಸ್ಮಿಕವಾಗಿ ನಡೆಯುವ ಅಪರಾಧ ಕೃತ್ಯಗಳಲ್ಲಿ ಪಾಲ್ಗೊಂಡು ಆರೋಪಿಗಳಾಗಿ ಜೈಲು ಸೇರುವ ಕೆಲವರಿಗೆ ಜಾಮೀನು ದೊರೆತರೂ ಸಹ ಅದಕ್ಕೆ ಕಟ್ಟಬೇಕಾದ ಹಣವನ್ನು ಹೊಂದಿಸಲು ಸಾಧ್ಯವಾಗದೆ ಜೈಲಿನಲ್ಲಿಯೇ ಮುಂದುವರೆದಿರುತ್ತಾರೆ.
ಈ ಹಿಂದೆ ಇದೆ ಕಾರಣಕ್ಕಾಗಿ ಕನ್ನಡದ ಖ್ಯಾತ ನಟ ದುನಿಯಾ ವಿಜಯ್, ಹಲವು ಕೈದಿಗಳಿಗೆ ಆರ್ಥಿಕ ನೆರವು ನೀಡುವ ಮೂಲಕ ಅವರುಗಳ ಬಿಡುಗಡೆಗೆ ನೆರವಾಗಿದ್ದರು. ಇದೀಗ ಕೇಂದ್ರ ಸರ್ಕಾರ ಸಹ ಇಂತಹ ಖೈದಿಗಳ ನೆರವಿಗೆ ಬಂದಿದೆ.
ಹೌದು, ಬುಧವಾರದಂದು ಮಂಡಿಸಿದ ಬಜೆಟ್ ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಹತ್ವದ ಘೋಷಣೆ ಮಾಡಿದ್ದು, ನ್ಯಾಯಾಲಯ ವಿಧಿಸಿದ ದಂಡ ಅಥವಾ ಜಾಮೀನಿನ ಹಣ ಪಾವತಿಸಲಾಗದ ಬಡ ಖೈದಿಗಳಿಗೆ ಆರ್ಥಿಕ ನೆರವು ನೀಡಲು ತೀರ್ಮಾನಿಸಲಾಗಿದೆ.
ಕೆಲವೊಂದು ಮೂಲಗಳ ಪ್ರಕಾರ ಜಾಮೀನು ಲಭಿಸಿದ್ದರೂ ಸಹ ಸುಮಾರು 5000ಕ್ಕೂ ಅಧಿಕ ಖೈದಿಗಳು ಆರ್ಥಿಕ ಮುಗ್ಗಟ್ಟಿನ ಕಾರಣಕ್ಕೆ ಹಲವು ವರ್ಷಗಳಿಂದ ಜೈಲಿನಲ್ಲಿಯೇ ಉಳಿದಿದ್ದಾರೆ ಎಂದು ಹೇಳಲಾಗಿದೆ. ಇದೀಗ ಕೇಂದ್ರ ಸರ್ಕಾರದ ಘೋಷಣೆ ಅವರುಗಳ ಬಿಡುಗಡೆಗೆ ನೆರವಾಗಲಿದೆ.