ಶಿವಮೊಗ್ಗ: ಕಳೆದ ಮೂರ್ನಾಲ್ಕು ದಿನಗಳಿಂದ ಗಾಜನೂರು ತುಂಗಾ ಜಲಾನಯನ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಬಾರಿ ಏರಿಕೆ ಕಂಡಿದೆ. ಇದರಿಂದಾಗಿ ಮುನ್ನೆಚ್ಚರಿಕೆ ಕ್ರಮವಾಗಿ ತುಂಗಾ ಜಲಾಶಯದ ಎರಡು ಗೇಟುಗಳನ್ನು ತೆರೆದು ನದಿಗೆ 12 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.
ಧಾರಾಕಾರ ಮಳೆ ಇದೇ ರೀತಿ ಮುಂದುವರೆದಲ್ಲಿ ತುಂಗಾ ಜಲಾನಯನ ಪ್ರದೇಶದಲ್ಲಿ ಮತ್ತು ಹೆಚ್ಚಿನ ಮಳೆ ಮುಂದುವರೆದಲ್ಲಿ ತುಂಗಾ ಜಲಾಶಯದಿಂದ ಇನ್ನಷ್ಟು ಗೇಟ್ ಗಳನ್ನು ತೆರೆದು ನದಿಗೆ ಹೆಚ್ಚಿನ ಪ್ರಮಾಣದ ನೀರನ್ನು ಬಿಡಲಾಗುವುದು. ನದಿ ಪಾತ್ರದ ಜನರು ಜಾನುವಾರುಗಳನ್ನು ನದಿಗೆ ಬಿಡದಂತೆ ಮತ್ತು ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ.
ಜಲಾಶಯದಿಂದ ನದಿಗೆ ನೀರು ಹರಿಬಿಟ್ಟಿರುವುದರಿಂದ ನಗರ ವ್ಯಾಪ್ತಿಯಲ್ಲಿ ಹರಿಯುವ ತುಂಗಾ ನದಿಯಲ್ಲಿ ನೀರು ಹರಿವಿನ ಪ್ರಮಾಣ ಭಾರೀ ಏರಿಕೆಯಾಗುತ್ತಿದೆ.