ಬರ್ಲಿನ್: ಪ್ರಧಾನಿ ನರೇಂದ್ರ ಮೋದಿ ಇಂದಿನಿಂದ ಯುರೋಪ್‌ನ ಜರ್ಮನಿ, ಡೆನ್ಮಾರ್ಕ್ ಮತ್ತು ಫ್ರಾನ್ಸ್ ಗೆ ಮೂರು ದಿನಗಳ ಕಾಲ ಪ್ರವಾಸ ಕೈಗೊಂಡಿದ್ದು, ಜರ್ಮನಿ ತಲುಪಿದ್ದಾರೆ.
ಸೋಮವಾರ ಬೆಳಿಗ್ಗೆ ಜರ್ಮನಿಯ ಬರ್ಲಿನ್-ಬ್ರಾಂಡೆನ್ ಬರ್ಗ್ ವಿಮಾನ ನಿಲ್ದಾಣಕ್ಕೆ ಬಂದಿಳಿದು ಹೊಟೇಲ್ ಅಡ್ಲಾನ್ ಕೆಂಪಿನ್ಸ್ಕಿಗೆ ತೆರಳಿದ್ದಾರೆ.
ತದನಂತರ ಜರ್ಮನಿಯ ಹೋಟೆಲ್ ಗೆ ಬಂದಿದ್ದ ಮಕ್ಕಳೊಂದಿಗೆ ಸಮಯ ಕಳೆದ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅದರಲ್ಲೂ ಬಾಲಕನೊಂದಿಗೆ ದೇಶಭಕ್ತಿ ಗೀತೆಗೆ ತಾಳ ಹಾಕಿದ ವಿಡಿಯೋ ಎಲ್ಲರ ಮೆಚ್ಚುಗೆ ಗಳಿಸಿದೆ. ಮಕ್ಕಳೊಂದಿಗೆ ಪ್ರಧಾನಿ ಮಾತನಾಡಿದ ವಿಡಿಯೋವನ್ನು ವಿವಿಧ ಸಚಿವರು ಕೂ ಆಪ್ ಮೂಲಕ ಹಂಚಿಕೊಂಡಿದ್ದಾರೆ.
ವಿಡಿಯೋದಲ್ಲಿ ಒಂದು ಮಗು ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರ ಬಿಡಿಸಿ ಅವರಿಂದ ಸಹಿ ಪಡೆದುಕೊಂಡರೆ, ಹುಡುಗ ದೇಶಭಕ್ತಿ ಗೀತೆ ಹೇಳಿ ಭೇಷ್ ಎನಿಸಿಕೊಂಡಿದ್ದಾನೆ. ಇನ್ನು ಕೆಲವರು ಪ್ರಧಾನಿ ಮೋದಿ ಕಾಲಿಗೆ ಬಿದ್ದು ನಮಸ್ಕರಿಸಿದರೆ, ಇನ್ನು ಕೆಲವರು ಹಸ್ತಲಾಘವ ಮಾಡಿ, ಸೆಲ್ಫಿ ತೆಗೆದುಕೊಂಡು ಖುಷಿಪಟ್ಟರು. ಜರ್ಮನಿಯಲ್ಲಿ ಮೋದಿ ಇಂದು ಜರ್ಮನ್ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಅವರೊಂದಿಗೆ ದ್ವಿಪಕ್ಷೀಯ ಚರ್ಚೆಗಳನ್ನು ನಡೆಸುವ ಸಾಧ್ಯತೆ ಇದೆ.
ಪಿಎಂ ಮೋದಿ ಅವರು ಮಂಗಳವಾರ ಡೆನ್ಮಾರ್ಕ್ ಗೆ, ಬುಧವಾರ ಪ್ಯಾರಿಸ್‌ಗೆ ತೆರಳಿ ಅಲ್ಲಿ ಪ್ರಧಾನಿ ಹೊಸದಾಗಿ ಮರು ಆಯ್ಕೆಯಾದ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರನ್ನು ಭೇಟಿಯಾಗುವ ಮೂಲಕ ಪ್ರವಾಸ ಕೊನೆಗೊಳಿಸಲಿದ್ದಾರೆ.