ವಿಶ್ವ ಆರೋಗ್ಯ ಸಂಸ್ಥೆಯ ಅಧಿಕೃತ ವೆಬ್ಸೈಟ್ನಲ್ಲಿ ಜಮ್ಮು ಹಾಗೂ ಕಾಶ್ಮೀರವನ್ನು ಪಾಕಿಸ್ತಾನ, ಚೀನಾಗೆ ಸೇರಿದ ಭಾಗವೆಂದು ತೋರಿಸುತ್ತಿರುವ ಬಗ್ಗೆ ಟಿಎಂಸಿ ರಾಜ್ಯಸಭಾ ಸದಸ್ಯ ಸಂತನು ಸೇನ್ ಭಾನುವಾರ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ.
ಪತ್ರದಲ್ಲಿ, ಸಂತನು ಸೇನ್ https://covid19.who.int ಗೆ ಭೇಟಿ ನೀಡಿದಾಗ, ವಿಶ್ವ ಭೂಪಟವನ್ನು ಪ್ರದರ್ಶಿಸಲಾಯಿತು ಮತ್ತು ಅವರು ಭಾರತದ ಭಾಗವನ್ನು ಜೂಮ್ ಮಾಡಿದಾಗ, ಅದು ಜಮ್ಮು ಮತ್ತು ಕಾಶ್ಮೀರದ ಭಾಗಕ್ಕೆ ಆಶ್ಚರ್ಯಕರ ಎರಡು ವಿಭಿನ್ನ ಬಣ್ಣಗಳ ನೀಲಿ ನಕ್ಷೆಯನ್ನು ತೋರಿಸುತ್ತಿದೆ ಎಂದು ಉಲ್ಲೇಖಿಸಿದ್ದಾರೆ.
ನಾನು ನೀಲಿ ಬಣ್ಣದ ಭಾಗದ ಮೇಲೆ ಕ್ಲಿಕ್ ಮಾಡಿದಾಗ ಅದು ನಮ್ಮ ದೇಶದ ಕೋವಿಡ್ ಮಾಹಿತಿಯನ್ನು ನೀಡುತ್ತಿದೆ. ಆದರೆ ಜಮ್ಮು ಮತ್ತು ಕಾಶ್ಮೀರದ ಮೇಲೆ ಇರುವ ವಿಭಿನ್ನ ಬಣ್ಣಗಳ ಮೇಲೆ ಕ್ಲಿಕ್ ಮಾಡಿದಾಗ ಅತಿಯಾದ ಆಶ್ಚರ್ಯಕರ ವಿಚಾರ ಎಂಬಂತೆ ದೊಡ್ಡ ಭಾಗವು ಪಾಕಿಸ್ತಾನದ ಕೋವಿಡ್ ಮಾಹಿತಿಯನ್ನು ನೀಡುತ್ತಿದ್ದರೆ ಇನ್ನೊಂದು ಚಿಕ್ಕ ಭಾಗವು ಚೀನಾದ ಕೋವಿಡ್ 19 ಮಾಹಿತಿಯನ್ನು ನೀಡುತ್ತಿದೆ ಎಂದು ಹೇಳಿದರು. ಅಲ್ಲದೇ ಅರುಣಾಚಲ ಪ್ರದೇಶ ಭಾಗವನ್ನೂ ವಿಭಿನ್ನವಾಗಿ ತೋರಿಸಲಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇದೊಂದು ಗಂಭೀರ ಅಂತಾರಾಷ್ಟ್ರೀಯ ಸಮಸ್ಯೆಯಾಗಿದ್ದು ಈ ಬಗ್ಗೆ ಕೇಂದ್ರ ಸರ್ಕಾರವು ಹೆಚ್ಚಿನ ಗಮನ ನೀಡಬೇಕಿದೆ. ಹಾಗೂ ಈ ಸಮಸ್ಯೆಯ ಬಗ್ಗೆ ಈಗಾಗಲೇ ಕ್ರಮ ಕೈಗೊಳ್ಳಬೇಕಿತ್ತು ಎಂದಿದ್ದಾರೆ.
ಇಂತಹದ್ದೊಂದು ದೊಡ್ಡ ತಪ್ಪನ್ನು ಅದು ಹೇಗೆ ಇಷ್ಟು ದಿನಗಳ ಕಾಲ ಪ್ರಶ್ನೆ ಮಾಡಲಾಗದೇ ಬಿಡಲಾಗಿದೆ..? ಈ ಬಗ್ಗೆ ಸರ್ಕಾರವು ಶೀಘ್ರದಲ್ಲಿಯೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.