ಜಪ್ತಿ ಮಾಡಿದ ಚಿನ್ನ, ಬೆಳ್ಳಿ ಮೊದಲಾದ ಬೆಲೆ ಬಾಳುವ ವಸ್ತುಗಳನ್ನು ಪೊಲೀಸರು ಒಂದು ತಿಂಗಳವರೆಗೆ ಮಾತ್ರ ತಮ್ಮ ವಶದಲ್ಲಿರಿಸಿಕೊಳ್ಳಬಹುದು. ಬಳಿಕ ಸಂತ್ರಸ್ತರು ಅಥವಾ ದೂರುದಾರರ ಮಧ್ಯಂತರ ಸುಪರ್ದಿಗೆ ಅವುಗಳನ್ನು ನೀಡಬೇಕು ಎಂದು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.
ಪ್ರಕರಣವೊಂದರ ವಿಚಾರಣೆ ವೇಳೆ ಈ ಆದೇಶ ಹೊರಡಿಸಲಾಗಿದ್ದು, ನ್ಯಾಯಾಲಯದಲ್ಲಿ ವಿಚಾರಣೆ ನಡೆಯುವಾಗ ವರ್ಷಗಟ್ಟಲೆ ಪೊಲೀಸರು ಅವುಗಳನ್ನು ತಮ್ಮ ವಶದಲ್ಲಿ ಇರಿಸಿಕೊಂಡರೆ ಯಾವುದೇ ಪ್ರಯೋಜನ ಇಲ್ಲ. ಹೀಗಾಗಿ ಇಂತಹ ವಸ್ತುಗಳನ್ನು 15 ದಿನದಿಂದ ಒಂದು ತಿಂಗಳವರೆಗೆ ತಮ್ಮ ವಶದಲ್ಲಿ ಪೊಲೀಸರು ಇಟ್ಟುಕೊಳ್ಳಬಹುದು. ಅವಧಿ ಬಳಿಕ ದೂರುದಾರರು ಅಥವಾ ಸಂತ್ರಸ್ತರ ಮಧ್ಯಂತರ ಸುಪರ್ದಿಗೆ ನೀಡಬೇಕು ಎಂದು ತಿಳಿಸಲಾಗಿದೆ.
ಸಂತ್ರಸ್ತ ಅಥವಾ ದೂರುದಾರರ ಮಧ್ಯಂತರ ಸುಪರ್ದಿಗೆ ನೀಡುವ ವೇಳೆ ಅವುಗಳ ಫೋಟೋ ತೆಗೆದುಕೊಳ್ಳುವುದರ ಜೊತೆಗೆ ಸಮಗ್ರ ಪಂಚನಾಮೆ ಮಾಡಬೇಕು. ಅಲ್ಲದೆ ಇವುಗಳನ್ನು ಪಡೆದುಕೊಂಡವರು ವಿಚಾರಣೆ ಸಂದರ್ಭದಲ್ಲಿ ಅಗತ್ಯ ಬಿದ್ದರೆ ಹಾಜರುಪಡಿಸುವ ಕುರಿತಂತೆ, ಬಾಂಡ್ ಬರೆಯಿಸಿಕೊಳ್ಳಬೇಕು ಮತ್ತು ಸೂಕ್ತ ಭದ್ರತಾ ಖಾತರಿಯನ್ನು ಪಡೆದುಕೊಳ್ಳಬೇಕು ಎಂದು ನ್ಯಾಯಾಲಯ ಸೂಚಿಸಿದೆ.