ಬೆಲೆ ಏರಿಕೆ ಜನಸಾಮಾನ್ಯರ ನೆಮ್ಮದಿಯನ್ನೇ ಕಿತ್ತುಕೊಂಡಿದೆ. ಪೆಟ್ರೋಲ್ – ಡೀಸೆಲ್ ನಿಂದ ಹಿಡಿದು ದಿನಸಿ, ಹಣ್ಣು, ತರಕಾರಿ ಹೀಗೆ ಪ್ರತಿಯೊಂದು ವಸ್ತುವೂ ದುಬಾರಿಯಾಗಿದೆ. ಇನ್ಮೇಲೆ ಮನೆ ಖರೀದಿ ಮಾಡೋದು ಕೂಡ ಇನ್ನಷ್ಟು ಕಷ್ಟವಾಗಲಿದೆ.
ಈವರೆಗೆ ಗೃಹ ಸಾಲದ ಮರು ಪಾವತಿ ಮೇಲಿನ 3.50 ಲಕ್ಷದ ಬಡ್ಡಿಯ ಪಾವತಿಯ ಮೇಲೆ ವಾರ್ಷಿಕವಾಗಿ ತೆರಿಗೆ ವಿನಾಯಿತಿ ನೀಡಲಾಗುತ್ತಿತ್ತು. ಮೊದಲ ಬಾರಿಗೆ ಮನೆ ಖರೀದಿಸುವವರಿಗೆ ಈ ಸವಲತ್ತು ಕೊಡಲಾಗುತ್ತಿತ್ತು. ಆದ್ರೆ ಇಂದಿನಿಂದ ಅಂದರೆ ಏಪ್ರಿಲ್1 ರಿಂದ ಮೊದಲ ಬಾರಿಗೆ ಮನೆ ಖರೀದಿಸುವವರಿಗೆ ಸೆಕ್ಷನ್ 80EEA ಅಡಿಯಲ್ಲಿ ಹೆಚ್ಚುವರಿ ತೆರಿಗೆ ವಿನಾಯಿತಿಯ ಲಾಭವನ್ನು ಕೇಂದ್ರ ಸರ್ಕಾರ ಸ್ಥಗಿತಗೊಳಿಸಿದೆ.
ಸರ್ಕಾರವು ಈ ತೆರಿಗೆ ವಿನಾಯಿತಿ ಅವಧಿಯನ್ನು ವಿಸ್ತರಿಸದ ಕಾರಣ ಇಂದಿನಿಂದ ಗೃಹ ಸಾಲದ ಮೇಲಿನ 1.5 ಲಕ್ಷ ರೂಪಾಯಿಗಳ ಹೆಚ್ಚುವರಿ ವಿನಾಯಿತಿ ನಿಮಗೆ ಸಿಗುವುದಿಲ್ಲ. 2022ರ ಬಜೆಟ್ನಲ್ಲಿ, ಈ ತೆರಿಗೆ ವಿನಾಯಿತಿಗೆ ಗಡುವನ್ನು ವಿಸ್ತರಿಸುವುದಾಗಿ ಸರ್ಕಾರ ಘೋಷಿಸಿರಲಿಲ್ಲ.
ಮಧ್ಯಮ ವರ್ಗದವರು ಕೂಡ ಮನೆ ಖರೀದಿಸಲು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಗೃಹ ಸಾಲಗಳ ಮೇಲಿನ ಈ ತೆರಿಗೆ ವಿನಾಯಿತಿಯನ್ನು 2019ರ ಏಪ್ರಿಲ್ 1ರಿಂದ ಆರಂಭಿಸಲಾಗಿತ್ತು. ಈ ಯೋಜನೆಯಲ್ಲಿ, ಮನೆ ಆಸ್ತಿಯ ಸ್ಟ್ಯಾಂಪ್ ಡ್ಯೂಟಿ 45 ಲಕ್ಷಕ್ಕಿಂತ ಕಡಿಮೆಯಿದ್ದರೆ, ನೀವು ಗೃಹ ಸಾಲದ ಬಡ್ಡಿ ಪಾವತಿಯಲ್ಲಿ 1.50 ಲಕ್ಷದವರೆಗೆ ಆದಾಯ ತೆರಿಗೆ ವಿನಾಯಿತಿ ಪಡೆಯಬಹುದಿತ್ತು.