ಕೋಲ್ಕತ್ತಾ: ಹೌರಾ ಸೇತುವೆಯ ಗುಟ್ಕಾ ಬಣ್ಣದ (ಕೊಳಕು) ಚಿತ್ರವನ್ನು ಟ್ವೀಟ್ ಮಾಡಿರುವ ಐಎಎಸ್ ಅಧಿಕಾರಿಯೊಬ್ಬರು ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಬಿಗ್ ಬಿ ಅಮಿತಾಬ್ ಬಚ್ಚನ್ ಅವರಿಂದ ಉತ್ತರಗಳನ್ನು ಕೇಳಿದ್ದಾರೆ.
ಬಾಲಿವುಡ್ ಸೂಪರ್‌ಸ್ಟಾರ್‌ಗಳಾದ ಶಾರುಖ್ ಖಾನ್, ಅಜಯ್ ದೇವಗನ್ ಮತ್ತು ಅಕ್ಷಯ್ ಕುಮಾರ್ ಒಳಗೊಂಡಿರುವ ಹೊಸ ತಂಬಾಕು ಜಾಹೀರಾತಿನ ಸುತ್ತಲಿನ ವಿವಾದಗಳು ತಣ್ಣಗಾಗುವ ಲಕ್ಷಣಗಳು ತೋರುತ್ತಿಲ್ಲ. ಅಕ್ಕಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದರೆ, ಅಜಯ್ ದೇವಗನ್ ಅವರು ತಂಬಾಕು ಬ್ರಾಂಡ್‌ನ ವಿಮಲ್ ಉತ್ಪನ್ನದ ಜಾಹೀರಾತಿನಲ್ಲಿ ನಟಿಸುವ ಅವರ ವೈಯಕ್ತಿಕ ಆಯ್ಕೆ ಕುರಿತಾಗಿ ಸಮರ್ಥಿಸಿಕೊಂಡಿದ್ದರು.
ಇದೀಗ, ಪಶ್ಚಿಮ ಬಂಗಾಳದ ಐಎಎಸ್ ಅಧಿಕಾರಿಯೊಬ್ಬರು ಎಸ್‌ಆರ್‌ಕೆ, ಅಜಯ್ ಮತ್ತು ಅಮಿತಾಬ್ ಬಚ್ಚನ್ ಅವರಂತಹ ನಟರನ್ನು ತೀವ್ರವಾಗಿ ಟೀಕಿಸಿದ್ದಾರೆ. ಐಎಎಸ್ ಅಧಿಕಾರಿ ಅವನೀಶ್ ಶರಣ್ ಅವರು ಟ್ವಿಟ್ಟರ್‌ನಲ್ಲಿ ಹೌರಾ ಸೇತುವೆಯ ಒಂದು ಕಂಬದ ಚಿತ್ರವನ್ನು ಹಂಚಿಕೊಂಡಿದ್ದಾರೆ. ಇದು ತಂಬಾಕು ತಿಂದ ಜನರು ಉಗುಳಿ ಸೇತುವೆಯನ್ನು ಗಲೀಜು ಮಾಡಿರುವ ಚಿತ್ರಣವಾಗಿದೆ. ಗುಟ್ಕಾದೊಂದಿಗೆ ಲೇಪಿತ ಲಾಲಾರಸವು 70 ವರ್ಷಗಳ ಐಕಾನಿಕ್ ಸೇತುವೆಯನ್ನು ನಾಶಪಡಿಸುತ್ತಿದೆ. ಹೌರಾ ಸೇತುವೆಯು ಗುಟ್ಕಾ-ಚೂವರ್‌ಗಳಿಂದ ದಾಳಿಗೆ ಒಳಗಾಗಿದೆ ಎಂದು ಅಧಿಕಾರಿ ಫೋಟೋ ಸಹಿತ ಟ್ವೀಟ್ ಮಾಡಿದ್ದಾರೆ.
ತಮ್ಮ ಟ್ವೀಟ್ ನಲ್ಲಿ ಐಎಎಸ್ ಅಧಿಕಾರಿ, ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಮತ್ತು ಅಮಿತಾಬ್ ಬಚ್ಚನ್ ಅವರನ್ನು ಟ್ಯಾಗ್ ಮಾಡಿದ್ದಾರೆ. ಪಶ್ಚಿಮ ಬಂಗಾಳದ ಆರೋಗ್ಯ ಇಲಾಖೆಯ ಅಧಿಸೂಚನೆಯ ಪ್ರಕಾರ ಗುಟ್ಕಾ ಅಥವಾ ಪಾನ್ ಮಸಾಲಾ (ಎರಡೂ ತಂಬಾಕು ಉತ್ಪನ್ನಗಳು) ಮಾರಾಟವನ್ನು ಪಶ್ಚಿಮ ಬಂಗಾಳದಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಗಿದೆ.