ಒಂದು ಕಾಲದಲ್ಲಿ ರಾಜ್ಯ ರಾಜಕೀಯದಲ್ಲಿ ಜನಾರ್ಧನ ರೆಡ್ಡಿ ಅವರದ್ದು ದೊಡ್ಡ ಹೆಸರು. ಮುಖ್ಯಮಂತ್ರಿಯನ್ನೇ ಬದಲಿಸಬಹುದಾದಷ್ಟು ಶಕ್ತಿಯನ್ನು ಜನಾರ್ಧನ ರೆಡ್ಡಿ ಹೊಂದಿದ್ದರು. ಆದರೆ ಯಾವಾಗ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜನಾರ್ಧನ ರೆಡ್ಡಿ ಜೈಲಿಗೆ ಹೋದರೋ ಅವರ ರಾಜಕೀಯ ಪ್ರಾಬಲ್ಯವೂ ತೀವ್ರವಾಗಿ ಕುಸಿಯಿತು.
ಅದರಲ್ಲೂ ಜನಾರ್ದನ ರೆಡ್ಡಿ ಅವರ ರಾಜಕೀಯ ಶಕ್ತಿ ಕೇಂದ್ರ ಬಳ್ಳಾರಿಗೆ ಕಾಲಿಡದಂತೆ ನ್ಯಾಯಾಲಯ ನಿರ್ಬಂಧ ಹೇರಿದ್ದ ಕಾರಣ ಪ್ರಾಬಲ್ಯ ಸಂಪೂರ್ಣವಾಗಿ ಕುಸಿಯುವಂತೆ ಮಾಡಿತು. ಇದೀಗ ಜನಾರ್ಧನ ರೆಡ್ಡಿ ಅವರು ಒಂದೊಂದೇ ಸಿಕ್ಕುಗಳನ್ನು ಬಿಡಿಸಿಕೊಂಡು ಹೊರಬರುತ್ತಿದ್ದಾರೆ. ಹೀಗಾಗಿ ಅವರ ರಾಜಕೀಯ ಮರು ಪ್ರವೇಶಕ್ಕೆ ಸಿದ್ಧತೆಗಳೂ ಸಹ ನಡೆಯುತ್ತಿವೆ.
ಜನಾರ್ಧನ ರೆಡ್ಡಿ ಅವರ ಆಪ್ತ ಸ್ನೇಹಿತ ಶ್ರೀರಾಮುಲು, ನವದೆಹಲಿಗೆ ತೆರಳಿ ಬಿಜೆಪಿ ವರಿಷ್ಠರನ್ನು ಭೇಟಿಯಾಗಿ ಜನಾರ್ಧನ ರೆಡ್ಡಿ ಅವರನ್ನು ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಅದರಲ್ಲೂ ಸಚಿವ ಆನಂದ್ ಸಿಂಗ್ ಮತ್ತೆ ಕಾಂಗ್ರೆಸ್ ಸೇರ್ಪಡೆಗೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿರುವ ಮಧ್ಯೆ ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ ಬಿಜೆಪಿ ಪ್ರಾಬಲ್ಯ ಸಾಧಿಸಲು ಜನಾರ್ಧನ ರೆಡ್ಡಿ ಮತ್ತೆ ಸಕ್ರಿಯ ರಾಜಕಾರಣಕ್ಕೆ ಮರಳುವುದು ಸೂಕ್ತ ಎಂದು ಶ್ರೀರಾಮುಲು ಪಕ್ಷದ ವರಿಷ್ಠರಿಗೆ ಮನವರಿಕೆ ಮಾಡಿದ್ದಾರೆ ಎನ್ನಲಾಗಿದೆ.
ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂಬರುವ ವಿಧಾನಸಭಾ ಚುನಾವಣೆಗೂ ಮುನ್ನವೇ ಜನಾರ್ಧನ ರೆಡ್ಡಿ ಅವರ ರಾಜಕೀಯ ರೀ ಎಂಟ್ರಿ ಅದ್ದೂರಿಯಾಗಿ ನಡೆಯಲಿದೆ ಎಂದು ಹೇಳಲಾಗುತ್ತಿದೆ.