ತೈಲ ಬೆಲೆ ಏರಿಕೆಯಿಂದ ಈಗಾಗಲೇ ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ದರ ಮುಗಿಲು ಮುಟ್ಟಿದ್ದು, ಜನಸಾಮಾನ್ಯರು ಪರದಾಡುತ್ತಿದ್ದಾರೆ. ಇದೀಗ ಈ ಸಾಲಿಗೆ ಬಡವರ್ಗದವರು ಹೆಚ್ಚಾಗಿ ಬಳಸುವ ಆಹಾರ ಪದಾರ್ಥ ಮಂಡಕ್ಕಿಯೂ ಸೇರಿದ್ದು, 350 ರಿಂದ 400 ರೂ. ಇದ್ದ 100 ಲೀಟರ್ ಮಂಡಕ್ಕಿ ದರವನ್ನು ಇದೀಗ 450 ರೂಪಾಯಿಗಳಿಗೆ ಏರಿಕೆ ಮಾಡಲಾಗಿದೆ.
ಗುರುವಾರದಂದು ಭದ್ರಾವತಿಯಲ್ಲಿ ನಡೆದ ಸಹ್ಯಾದ್ರಿ ಮಂಡಕ್ಕಿ ಉತ್ಪಾದನೆ ಹಾಗೂ ಮಾರಾಟ ಮತ್ತು ವಿವಿಧ ಕೈಗಾರಿಕೆದಾರರ ಸಹಕಾರ ಸಂಘದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಭತ್ತದ ಬೆಲೆ, ವಿದ್ಯುತ್ ಕಾರ್ಮಿಕರ ಕೂಲಿ ಹಾಗೂ ಕಚ್ಚಾ ವಸ್ತುಗಳ ಬೆಲೆ ಏರಿಕೆಯಿಂದಾಗಿ ಅನಿವಾರ್ಯವಾಗಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿಸಲಾಗಿದೆ.
ಮಂಡಕ್ಕಿಯನ್ನು ಮನೆಬಾಗಿಲಿಗೆ ಹೊತ್ತು ತರುವರು ಈವರೆಗೆ ಪ್ರತಿ ಲೀಟರ್ ಗೆ 5 ರೂಪಾಯಿಗಳಂತೆ ಮಾರಾಟ ಮಾಡುತ್ತಿದ್ದು, ಇದೀಗ 100 ಲೀಟರ್ ಮಂಡಕ್ಕಿ ದರ 450 ರೂಪಾಯಿಗಳಿಗೆ ಏರಿಕೆಯಾಗಿರುವುದರ ಹಿನ್ನೆಲೆಯಲ್ಲಿ ಪ್ರತಿ ಲೀಟರ್ ಗೆ ಆರೂವರೆಯಿಂದ ಏಳು ರೂಪಾಯಿಗಳಿಗೆ ಮಾರಾಟ ಮಾಡುವ ಸಾಧ್ಯತೆ ಇದೆ.