ಪೆಟ್ರೋಲ್ ಬೆಲೆ ಗಗನಕ್ಕೇರಿದೆ. ನಿಂಬೆ ಹಣ್ಣು ಕೂಡ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕ್ತಿದೆ. ಇದೀಗ ಜೀರಿಗೆಯ ಸರದಿ. ಜೀರಿಗೆಯ ಬೆಲೆಯಲ್ಲಿ ಕೂಡ ಭಾರೀ ಏರಿಕೆ ಆಗ್ತಾ ಇದೆ. ಬಿತ್ತನೆ ಪ್ರದೇಶ ಕಡಿಮೆಯಾಗಿರೋದು ಹಾಗೂ ಅತಿವೃಷ್ಟಿಯಿಂದ ಜೀರಿಗೆ ಬೆಳೆ ಹಾನಿಯಾಗಿದೆ.
ಸದ್ಯದಲ್ಲೇ ಜೀರಿಗೆ ಬೆಲೆಯಲ್ಲಿ ಶೇ.30-35ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಹಾಗೇನಾದ್ರೂ ಆದ್ರೆ ಜೀರಿಗೆ ಬೆಲೆ ಕಳೆದ 5 ವರ್ಷಗಳಲ್ಲಿ ಗರಿಷ್ಠ ಮಟ್ಟ ತಲುಪಬಹುದು. ಜೀರಿಗೆ ಬೆಲೆ ಕೆಜಿಗೆ 165-170 ರೂಪಾಯಿಗೆ ಏರಿಕೆ ಆಗಬಹುದು ಎನ್ನಲಾಗ್ತಿದೆ.
ಈ ವರ್ಷ ಜೀರಿಗೆ ಉತ್ಪಾದನೆ ಕಡಿಮೆ ಇದೆ. ಜೀರಿಗೆ ಬೆಳೆಯುವ ಪ್ರದೇಶವು ವರ್ಷದಿಂದ ವರ್ಷಕ್ಕೆ ಶೇ.21ರಷ್ಟು ಕುಸಿತ ಕಾಣ್ತಿದೆ. ಜೀರಿಗೆ ಉತ್ಪಾದಿಸುವ ಪ್ರಮುಖ ರಾಜ್ಯಗಳೆಂದರೆ ಗುಜರಾತ್ ಮತ್ತು ರಾಜಸ್ಥಾನ. ಗುಜರಾತ್‌ನಲ್ಲಿ ಶೇ.22ರಷ್ಟು ಹಾಗೂ ರಾಜಸ್ಥಾನದಲ್ಲಿ ಶೇ.20ರಷ್ಟು ಕೃಷಿ ಪ್ರದೇಶ ಕಡಿಮೆಯಾಗಿದೆ.
ರೈತರು ಸಾಸಿವೆ ಮತ್ತು ಅವರೆ ಬೆಳೆಗಳತ್ತ ಮುಖ ಮಾಡಿರುವುದು ಕೂಡ ಜೀರಿಗೆ ಉತ್ಪಾದನೆ ಕುಸಿತಕ್ಕೆ ಕಾರಣ ಎನ್ನಲಾಗ್ತಿದೆ. ಇದರಿಂದ ವಿಸ್ತೀರ್ಣ ಕುಸಿತವಾಗಿದೆ. ಸಾಸಿವೆ ಮತ್ತು ಹೆಸರು ಬೇಳೆ ಬೆಲೆ ಏರಿಕೆಯಿಂದಾಗಿ ರೈತರು ಅದನ್ನೇ ಬೆಳೆಯುವತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ.