ಭುವನೇಶ್ವರ: ಅಮಾನತುಗೊಂಡಿರುವ ಬಿಜೆಡಿ ಶಾಸಕ ಪ್ರಶಾಂತ್ ಜಗದೇವ್ ಕಾರನ್ನು ಜನರ ಮಧ್ಯೆಯೇ ಚಲಾಯಿಸಿದ ಪರಿಣಾಮ 10 ಪೊಲೀಸ್ ಸಿಬ್ಬಂದಿ ಮತ್ತು ಇಬ್ಬರು ಪತ್ರಕರ್ತರು ಸೇರಿದಂತೆ ಕನಿಷ್ಠ 22 ಜನರು ಗಾಯಗೊಂಡಿದ್ದಾರೆ. ಖುರ್ದಾ ಜಿಲ್ಲೆಯ ಬಾನಾಪುರದಲ್ಲಿ ಈ ಘಟನೆ ನಡೆದಿದೆ
ಬ್ಲಾಕ್ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯುತ್ತಿದ್ದಾಗ ಬಾಣಾಪುರ ಬಿಡಿಒ ಕಚೇರಿಯ ಹೊರಗೆ ಜಮಾಯಿಸಿದ ಜನಸಮೂಹದ ಮೇಲೆ ಜಗದೇವ್ ಕಾರು ಚಲಾಯಿಸಿದ್ದಾರೆ. ಘಟನೆಯಲ್ಲಿ ಜಗದೇವ್ ಕೂಡ ಗಾಯಗೊಂಡಿರುವುದಾಗಿ ವರದಿಯಾಗಿದೆ. ಈತನ ವಿರುದ್ಧ ಕೊಲೆ ಯತ್ನ, ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ ಸೇರಿದಂತೆ ಐಪಿಸಿಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಜಗದೇವ್ ಈಗ ಖಾಕಿ ವಶದಲ್ಲಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಂತರ ಬಂಧಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ. ಶಾಸಕರಿಗೆ ಮೊದಲು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ನಂತರ ಭುವನೇಶ್ವರದ ಏಮ್ಸ್ಗೆ ವರ್ಗಾಯಿಸಲಾಯಿತು.
ಘಟನೆಯಲ್ಲಿ ಇಬ್ಬರು ವ್ಯಕ್ತಿಗಳು, ಬಾಣಾಪುರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಆರ್ಆರ್ ಸಾಹು ಮತ್ತು ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಕೂಡ ಚಿಕಿತ್ಸೆಗಾಗಿ ಭುವನೇಶ್ವರದ ಏಮ್ಸ್ಗೆ ರವಾನಿಸಲಾಗಿದೆ. ಶಾಸಕರ ಅಜಾಗರೂಕತೆಯ ಚಾಲನೆಯ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.