ಚೀನಾ ಸರ್ಕಾರ ದೇಶದಲ್ಲಿ ಜನನ ಪ್ರಮಾಣವನ್ನು ಹೆಚ್ಚಿಸಲು ಹೊಸ ನೀತಿಗಳನ್ನು ಜಾರಿಗೆ ತರುತ್ತಿದೆ. ಒನ್ ಚೈಲ್ಡ್ ಪಾಲಿಸಿ ಮತ್ತು ಇತರ ಕೆಲವು ಕಾರಣಗಳಿಂದ ಚೀನಾದ ಜನಸಂಖ್ಯೆಯಲ್ಲಿ ಐತಿಹಾಸಿಕ ಕುಸಿತ ಕಂಡು ಬಂದಿರುವುದರಿಂದ ಈ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಇತ್ತೀಚೆಗೆ ಚೀನಾದ ಕೆಲವು ಕಾಲೇಜುಗಳಲ್ಲಿ ಪ್ರೀತಿಯ ಹುಡುಕಾಟವನ್ನು ಪೂರ್ಣಗೊಳಿಸುವ ಹೆಸರಿನಲ್ಲಿ ಒಂದು ವಾರದ ವಿಶೇಷ ರಜೆ ನೀಡಲಾಗಿದೆ. ಈ ನಿರ್ಧಾರವು ದೇಶದಲ್ಲಿ ಕಡಿಮೆಯಾಗುತ್ತಿರುವ ಜನಸಂಖ್ಯೆಯನ್ನು ಎದುರಿಸಲು ಪರಿಣಾಮಕಾರಿ ಮಾರ್ಗವೆಂದು ಪರಿಗಣಿಸಲಾಗಿದೆ.
ಏಪ್ರಿಲ್‌ನಲ್ಲಿ ಒಂದು ವಾರದ ವಸಂತ ವಿರಾಮ
ಚೀನಾದ ವೃತ್ತಿಪರ ಕಾಲೇಜುಗಳು ತಮ್ಮ ವಿದ್ಯಾರ್ಥಿಗಳಿಗೆ ಏಪ್ರಿಲ್ ತಿಂಗಳಲ್ಲಿ ಒಂದು ವಾರದ ರಜೆಯನ್ನು ಘೋಷಿಸಿವೆ. ಈ ಸಮಯದಲ್ಲಿ ಅವರು ತಮ್ಮ ಪ್ರೀತಿಯನ್ನು ಹುಡುಕಿಕೊಳ್ಳಬಹುದು. ಪ್ರಣಯ ಸಂಗಾತಿಯನ್ನು ಹುಡುಕುವ ಬಗ್ಗೆ ಪ್ರಕಟಣೆಯಲ್ಲಿ ಸ್ಪಷ್ಟವಾಗಿ ಹೇಳಿಲ್ಲವಾದರೂ, ಈ ಸುದೀರ್ಘ ರಜೆ ಪ್ರಕೃತಿಯನ್ನು ಮೆಚ್ಚಿಸಲು ಮತ್ತು ‘ಪ್ರೀತಿಯನ್ನು ಕಂಡುಕೊಳ್ಳಲು’ ಎಂದು ಸೂಚಿಸುತ್ತದೆ. ಈ ವಸಂತ ವಿರಾಮದಲ್ಲಿ ನೀವು ಮರಗಳ ಮೂಲಕ ತಂಪಾದ ಗಾಳಿಯನ್ನು ಅನುಭವಿಸಿ ಪಕ್ಷಿಗಳು ಹಾಡುವುದನ್ನು ಕೇಳಬಹುದು ಎಂದು ಕಾಲೇಜು ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ.
ಪ್ರಕೃತಿಯೊಂದಿಗೆ ಮರುಸಂಪರ್ಕಿಸಲು ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಪ್ರೋತ್ಸಾಹಿಸುವ ಪ್ರಯತ್ನ ಇದು ಎಂದೇ ಹೇಳಲಾಗಿದೆ. ಆದರೆ ಅದರ ಹಿಂದಿನ ಗುಪ್ತ ಉದ್ದೇಶವು ಎಲ್ಲರಿಗೂ ಅರ್ಥವಾಗಿದೆ. ದೇಶದಲ್ಲಿ ಜನನ ದರವನ್ನು ವೇಗಗೊಳಿಸಲು ಸರ್ಕಾರದ ಪ್ರಯತ್ನವಾಗಿ ಕಾಲೇಜುಗಳಿಗೆ ಈ ‘ಬ್ರೇಕ್’ ನೀಡಲಾಗಿದೆ.