alex Certify ಜನರ ಹಿತಕ್ಕಾಗಿ ಪಾದಯಾತ್ರೆ ತಾತ್ಕಾಲಿಕ ಸ್ಥಗಿತ; ಕೋವಿಡ್ ಕಡಿಮೆಯಾದ ಬಳಿಕ ರಾಮನಗರದಿಂದಲೇ ಮತ್ತೆ ಶುರು; ಸಿದ್ದರಾಮಯ್ಯ ಘೋಷಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜನರ ಹಿತಕ್ಕಾಗಿ ಪಾದಯಾತ್ರೆ ತಾತ್ಕಾಲಿಕ ಸ್ಥಗಿತ; ಕೋವಿಡ್ ಕಡಿಮೆಯಾದ ಬಳಿಕ ರಾಮನಗರದಿಂದಲೇ ಮತ್ತೆ ಶುರು; ಸಿದ್ದರಾಮಯ್ಯ ಘೋಷಣೆ

ರಾಮನಗರ: ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ ಜನರ ಆರೋಗ್ಯದ ದೃಷ್ಟಿಯಿಂದ ಮೇಕೆದಾಟು ಪಾದಯಾತ್ರೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸುತ್ತಿದ್ದೇವೆ. ಕೋವಿಡ್ ಕಡಿಮೆಯಾಗುತ್ತಿದ್ದಂತೆಯೇ ಇದೇ ರಾಮನಗರದಿಂದ ಮತ್ತೆ ಪಾದಯಾತ್ರೆ ಮುಂದುವರೆಸುತ್ತೇವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.

ರಾಮನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಎರಡು ತಿಂಗಳ ಹಿಂದೆಯೇ ಮೇಕೆದಾಟು ಪಾದಯಾತ್ರೆ ಘೋಷಿಸಿದ್ದೆವು. ನಾವು ಘೋಷಿಸಿದಾಗ ಕೊರೊನಾ ಸೋಂಕು ಇರಲಿಲ್ಲ. ನಮ್ಮ ನಿರ್ಧಾರದಂತೆಯೇ ಜನವರಿ 9ರಂದು ಸಂಗಮದಿಂದ ಪಾದಯಾತ್ರೆ ಆರಂಭಿಸಿದೆವು. ನಾಲ್ಕು ದಿನಗಳ ಕಾಲ ಯಶಸ್ವಿಯಾಗಿ ಪಾದಯಾತ್ರೆ ನಡೆದಿದೆ. ಇಂದು 5ನೇ ದಿನದ ಪಾದಯಾತ್ರೆ ರಾಮನಗರದಿಂದ ಹೊರಡಬೇಕಿತ್ತು. ಮೈಸೂರು-ಬೆಂಗಳೂರು ಹೆದ್ದಾರಿ ಮಾರ್ಗವಾಗಿ ಸಾಗಬೇಕಿತ್ತು. ಆದರೆ ನಿನ್ನೆ ರಾಜ್ಯದಲ್ಲಿ 15 ಸಾವಿರ ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ರಾಜ್ಯದಲ್ಲಿ ಅಧಿಕಾರ ಮಾಡಿರುವ ನಮ್ಮ ಪಕ್ಷಕ್ಕೆ ಜವಾಬ್ದಾರಿ ಇದೆ. ಸಾಂಕ್ರಾಮಿಕ ರೋಗದ ಬಗ್ಗೆ ಕಾಳಜಿಯಿದೆ. ಜವಾಬ್ದಾರಿ ನಿರ್ವಹಿಸುವುದು ನಮ್ಮ ಕರ್ತವ್ಯ. ಹಾಗಾಗಿ ಸೋಂಕು ಇನ್ನಷ್ಟು ಹರಡುವ ಸಾಧ್ಯತೆ ಇರುವುದರಿಂದ ಮುಂಜಾಗೃತಾ ಕ್ರಮವಾಗಿ ಪಾದಯಾತ್ರೆ ತಾತ್ಕಾಲಿಕ ಸ್ಥಗಿತಗೊಳಿಸುತ್ತಿದ್ದೇವೆ ಎಂದರು.

ಇಂದು ದೇಶ, ರಾಜ್ಯದಲ್ಲಿ ಕೋವಿಡ್ ಹೆಚ್ಚಳಕ್ಕೆ ಬಿಜೆಪಿಯವರೇ ಕಾರಣ. ಎಂ ಎಲ್ ಸಿಗಳ ಪದಗ್ರಹಣ ಸಮಾರಂಭದಲ್ಲಿಯೂ ಕೋವಿಡ್ ನಿಯಮ ಉಲ್ಲಂಘಿಸಿದರು, 4000 ಜನರನ್ನು ಸೇರಿಸಿ ಕಾರ್ಯಕ್ರಮ ಮಾಡಿದರು. ಕೇಂದ್ರ ಸಚಿವರು ಜನಾಶೀರ್ವಾದ ಯಾತ್ರೆ ಮಾಡಿದರು, ರಾಜ್ಯದಲ್ಲಿ ಸಿಎಂ ತವರು ಜಿಲ್ಲೆಯಲ್ಲಿ, ಗೃಹಸಚಿವರ ಊರಿನಲ್ಲಿಯೂ ಸಭೆ-ಸಮಾರಂಭ, ಜಾತ್ರೆಗಳು ನಡೆದವು, ಸುಭಾಷ್ ಗುತ್ತೇದಾರ್, ರೇಣುಕಾಚಾರ್ಯ ಜಾತ್ರೆ ಆಯೋಜಿಸಿದರು. ಅವರಾರ ಮೇಲೂ ಕ್ರಮ ಕೈಗೊಳ್ಳದ ರಾಜ್ಯ ಸರ್ಕಾರ ಇಂದು ಕೋವಿಡ್ ಹರಡಲು ಕಾಂಗ್ರೆಸ್ ಕಾರಣ ಎಂದು ನಮ್ಮ ವಿರುದ್ಧ ಆರೋಪ ಮಾಡಿ ಎಫ್ಐಆರ್ ದಾಖಲಿಸಿ ಕ್ರಮ ಕೈಗೊಂಡಿದೆ. ಉದ್ದೇಶಪೂರ್ವಕವಾಗಿ ಪಾದಯಾತ್ರೆ ತಡೆಯಬೇಕು ಎಂದು ಬಿಜೆಪಿ ಹುನ್ನಾರ ನಡೆಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆದರೆ ನಮಗೆ ಜನರ ಹಿತದ ಬಗ್ಗೆ ಜವಾಬ್ದಾರಿ ಇದೆ. ಕೋವಿಡ್ ಉಲ್ಬಣವಾಗಬಾರದು ಎಂಬ ಕಾರಣಕ್ಕೆ ಜನರ ಆರೋಗ್ಯದ ದೃಷ್ಟಿಯಿಂದ ಪಾದಯಾತ್ರೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸುತ್ತಿದ್ದೇವೆ. ಮೂರನೇ ಅಲೆ ಕಡಿಮೆಯಾದ ತಕ್ಷಣ ಕೋವಿಡ್ ನಿಯಮ ಸಡಿಲವಾಗುತಿದ್ದಂತೆಯೇ ಮತ್ತೆ ರಾಮನಗರದಿಂದಲೇ ಇದೇ ಸ್ಥಳದಿಂದಲೇ ಪಾದಯಾತ್ರೆ ಮುಂದುವರೆಯುತ್ತೆ. ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲೇ ಪಾದಯಾತ್ರೆ ಅಂತ್ಯವಾಗುತ್ತೆ. ಕಾಂಗ್ರೆಸ್ ಯಾವತ್ತೂ ಜನರ ಒಳಿತನ್ನು ಬಯಸುವ ಪಕ್ಷ. ಜನರ ಒಳಿತೇ ಕಾಂಗ್ರೆಸ್ ಒಳಿತು. ನೀರಿಗಾಗಿ ನಮ್ಮ ಹೋರಾಟ ಮುಂದುವರೆಯುತ್ತೆ ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...