ಒಮ್ಮೆ ಪ್ರವಾಹ ಬಂತಂದ್ರೆ ಸಂಪೂರ್ಣ ಜನಜೀವನವೇ ಅಸ್ತವ್ಯಸ್ಥವಾಗಿ ಹೋಗುತ್ತದೆ. ಎಲ್ಲರೂ ಮನೆಮಠ ಕಳೆದುಕೊಂಡು ಬೀದಿಗೆ ಬೀಳುವಂಥ ಪರಿಸ್ಥಿತಿ ಎದುರಾಗುತ್ತದೆ. ಜಾನುವಾರುಗಳು, ಸಾಕು ಪ್ರಾಣಿಗಳಿಗೂ ಕುತ್ತು ತರುತ್ತದೆ ಈ ಪ್ರವಾಹ.
ತಗ್ಗು ಪ್ರದೇಶಗಳಲ್ಲಿ ವಾಸಿಸುವವರಿಗೆ ಪ್ರವಾಹ ಭೀತಿ ಹೆಚ್ಚು. ಉದಾಹರಣೆಗೆ ಬಿಹಾರದಲ್ಲಿ ರಾಜ್ಯದ ಭೌಗೋಳಿಕ ಸ್ಥಳ ಮತ್ತು ನದಿಗಳ ಕಾರಣದಿಂದಾಗಿ ಪ್ರವಾಹವು ದೀರ್ಘಕಾಲಿಕ ಸಮಸ್ಯೆಯಾಗಿಬಿಟ್ಟಿದೆ. ಅಸ್ಸಾಂನಲ್ಲಿ ಕೂಡ ಪ್ರತಿವರ್ಷವೂ ಪ್ರವಾಹದಿಂದ ಅಪಾರ ಹಾನಿ ಸಂಭವಿಸುತ್ತದೆ. ಪ್ರವಾಹ ತಂದಿಡುವ ವಿನಾಶ ಅಂತಿಂಥದ್ದಲ್ಲ.
ಇದೀಗ ಜಪಾನ್ ಮೂಲದ ಕಂಪನಿಯೊಂದು ಪ್ರವಾಹ ಪೀಡಿತ ಪ್ರದೇಶಗಳ ಸಮಸ್ಯೆ ಬಗೆಹರಿಸಲು ಹೊಸ ಆವಿಷ್ಕಾರವನ್ನೇ ಮಾಡಿದೆ. ಇಚಿಜೊ ಕೊಮುಟೆನ್ ಎಂಬ ಸಂಸ್ಥೆ ತೇಲುವ ಮನೆಯನ್ನು ಕಂಡು ಹಿಡಿದಿದೆ. ಈ ಮನೆಯ ರಚನೆಯೇ ವಿಶಿಷ್ಟವಾಗಿದೆ. ಇದು ಜಲನಿರೋಧಕ ಮನೆ. ಪ್ರವಾಹ ಬಂದು ನೀರಿನ ಮಟ್ಟ ಹೆಚ್ಚಾದರೂ ಮನೆ ಮುಳುಗಬಹುದು ಎಂಬ ಭೀತಿಯಿಲ್ಲ. ಯಾಕಂದ್ರೆ ಈ ಮನೆ ನೀರಿನಲ್ಲಿ ತೇಲಲು ಆರಂಭಿಸುತ್ತದೆ.
ಇಚಿಜೊ ಕೊಮುಟೆನ್ ಆವಿಷ್ಕರಿಸಿರೋ ಈ ಫ್ಲೋಟಿಂಗ್ ಹೌಸ್ ಸದ್ಯ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ನೋಡಲು ಇದು ಸಾಮಾನ್ಯ ಮನೆಯಂತೆ ಕಾಣುತ್ತದೆ. ಆದರೆ ಸುತ್ತಲೂ ನೀರು ತುಂಬಲು ಪ್ರಾರಂಭಿಸಿದಾಗ, ಮನೆ ನಿಧಾನವಾಗಿ ನೆಲವನ್ನು ಬಿಟ್ಟು ಮೇಲಕ್ಕೆ ಏರುತ್ತದೆ. ಕಂಪನಿಯು ತೇಲುವ ಮನೆಯನ್ನು ಈಗಾಗಲೇ ಪ್ರದರ್ಶಿಸಿದೆ. ಮನೆಯು ನೆಲದಿಂದ ಕೆಲವು ಇಂಚುಗಳಷ್ಟು ಮೇಲಕ್ಕೆ ಏರುವುದನ್ನು ವಿಡಿಯೋದಲ್ಲಿ ವೀಕ್ಷಿಸಬಹುದು.
ಜಪಾನ್ ಮೂಲದ ಕಂಪನಿ ದಪ್ಪ ಕಬ್ಬಿಣದ ರಾಡ್‌ಗಳಿಂದ ಮನೆಯನ್ನು ನಿರ್ಮಾಣ ಮಾಡಿದ. ಇದು ದಪ್ಪನೆಯ ಕೇಬಲ್‌ಗಳಿಂದ ನೆಲಕ್ಕೆ ಸಂಪರ್ಕ ಹೊಂದಿದೆ. ಪ್ರವಾಹ ಉಂಟಾದಾಗ ಈ ಕೇಬಲ್ ಮೂಲಕವೇ ಮನೆ ಮೇಲಕ್ಕೇರುತ್ತದೆ. ನೀರಿನ ಮಟ್ಟ ಕಡಿಮೆಯಾಗುತ್ತಿದ್ದಂತೆ ಮತ್ತೆ ನೆಲಕ್ಕೆ ಜೋಡಿಸುತ್ತದೆ. ನೀರು ಒಳನುಗ್ಗದಂತೆ ಮೇಲ್ಮುಖವಾಗಿ ವಿದ್ಯುತ್ ಅಳವಡಿಸಲಾಗಿದೆ. ಮನೆ 5 ಮೀಟರ್ ಎತ್ತರದಲ್ಲಿ ತೇಲುವುದು ವಿಶೇಷ.