ಚೆನ್ನೈ: ಬಸ್ ನಿಲ್ದಾಣದಲ್ಲಿ ಡಿಎಂಕೆ ಕಾರ್ಯಕರ್ತನನ್ನು ಐವರು ಅಪರಿಚಿತ ದುಷ್ಕರ್ಮಿಗಳು ಹತ್ಯೆ ಮಾಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ತಮಿಳುನಾಡಿನ ಆಡಳಿತಾರೂಢ ಡಿಎಂಕೆಯ ಕಾರ್ಯಕರ್ತನನ್ನು ಬೆಳ್ಳಂಬೆಳಗ್ಗೆ ಹತ್ಯೆ ಮಾಡಲಾಗಿದೆ. ಜನನಿಬಿಡ ಬ್ರಾಡ್ವೇ ಬಸ್ ನಿಲ್ದಾಣದಲ್ಲಿ ಅಪರಿಚಿತ ದುಷ್ಕರ್ಮಿಗಳಿಂದ ಅವರು ಹತರಾಗಿದ್ದಾರೆ.
ಚೆನ್ನೈನ ವ್ಯಾಸರ್ಪಾಡಿಯ ಡಿಎಂಕೆ ಕಾರ್ಯಕರ್ತರಾದ ಸೌಂದರರಾಜನ್ ಅವರು ಬೇಸಿಗೆಯ ಬೇಗೆಯಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಉಚಿತ ಕುಡಿಯುವ ನೀರು ಒದಗಿಸುತ್ತಿದ್ದರು. ತಮ್ಮ ಪಕ್ಷವು ಸ್ಥಾಪಿಸಿದ್ದ ಟೆಂಟ್ನಲ್ಲಿ ನೀರಿನ ಕ್ಯಾನ್ಗಳನ್ನು ತುಂಬಿಸುತ್ತಿದ್ದಾಗ ಏಕಾಏಕಿ ದಾಳಿ ನಡೆಸಿದ ಐವರು ದುಷ್ಕರ್ಮಿಗಳು ಹತ್ಯೆ ಮಾಡಿ ಪರಾರಿಯಾಗಿದ್ದಾರೆ.
ಆರೋಪಿಗಳ ಪತ್ತೆಗೆ ಪೊಲೀಸರು ಸುತ್ತಮುತ್ತಲಿನ ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಸ್ಥಳೀಯ ನಗರ ಸಂಸ್ಥೆಗೆ ಇತ್ತೀಚೆಗೆ ನಡೆದ ಚುನಾವಣೆಯ ನಂತರ ಸೌಂದರರಾಜನ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಈ ಸಂಬಂಧ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.