ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್ನ ಮೇಲೆ ಯುದ್ಧ ಘೋಷಣೆ ಮಾಡಿದ ಬಳಿಕ ಉಕ್ರೇನ್ನ ಹಲವಾರು ನಗರಗಳ ಮೇಲೆ ಕ್ಷಿಪಣಿ ದಾಳಿಯನ್ನು ನಡೆಸಲಾಗಿದೆ. ಉಕ್ರೇನ್ನಲ್ಲಿ ಜನನಿಬಿಡ ಪ್ರದೇಶಗಳ ಮೇಲೆ ದಾಳಿ ಮಾಡಿಲ್ಲ ಎಂದು ರಷ್ಯಾದ ಮಿಲಿಟರಿ ಪಡೆ ಹೇಳಿದ್ದರೂ ಸಹ ಉಕ್ರೇನ್ನ ಇವಾನೋ ಫ್ರಾಂಕಿವ್ಸ್ಕ್ನಲ್ಲಿರುವ ವಿಮಾನ ನಿಲ್ದಾಣದ ಮೇಲೆ ಕ್ಷಿಪಣಿ ದಾಳಿ ನಡೆಸುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮಾಧ್ಯಮವೊಂದು ಶೇರ್ ಮಾಡಿರುವ 30 ಸೆಕೆಂಡ್ಗಳ ವಿಡಿಯೋದಲ್ಲಿ ಕ್ಷಿಪಣಿಯೊಂದು ಮೇಲಿನಿಂದ ಬಿದ್ದು ಜೋರಾಗಿ ಸದ್ದು ಮಾಡಿರುವುದನ್ನು ಗಮನಿಸಬಹುದಾಗಿದೆ. ಈ ಕ್ಷಿಪಣಿಯು ಅಪ್ಪಳಿಸಿದ ಬಳಿಕ ತತ್ಕ್ಷಣ ಕಟ್ಟಡದಿಂದ ದಟ್ಟವಾದ ಹೊಗೆ ಹೊರಬಂದಿರುವುದನ್ನು ಕಾಣಬಹುದಾಗಿದೆ.
ಉಕ್ರೇನ್ನ ಆಂತರಿಕ ಸಚಿವರ ಸಲಹೆಗಾರ ಆ್ಯಂಟನ್ ಗೆರಾಶ್ಚೆಂಕೊ, ರಷ್ಯಾದ ಮಿಲಿಟರಿಯ ಉಕ್ರೇನಿಯನ್ ಮಿಲಿಟರಿ ಕಮಾಂಡ್, ವಾಯುನೆಲೆಗಳು ಹಾಗೂ ಕೈವ್, ಖಾರ್ಕಿವ್ ಮತ್ತು ಡ್ನಿಪ್ರೋದಲ್ಲಿನ ಮಿಲಿಟರಿ ಡಿಪೋಗಳ ಮೇಲೆ ಕ್ಷಿಪಣಿ ದಾಳಿಯನ್ನು ನಡೆಸಿದೆ ಎಂದು ಹೇಳಿದರು. ಆದರೆ ಜನನಿಬಿಡ ಪ್ರದೇಶಗಳಲ್ಲಿ ದಾಳಿ ನಡೆಸಿಲ್ಲ ಎಂದು ರಷ್ಯಾದ ಸೇನೆಯು ಹೇಳಿದೆ.