ಬೆಂಗಳೂರು: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿಗೆ ರಾಜೀನಾಮೆ ನೀಡಿದ ಬೆನ್ನಲ್ಲೇ ಮಾಜಿ ಸಿಎಂ ಯಡಿಯೂರಪ್ಪ ಕಿಡಿ ಕಾರಿದ್ದಾರೆ. ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿಗೆ ನಾವು ಏನು ಕಮ್ಮಿ ಮಾಡಿದ್ವಿ? ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಯಡಿಯೂರಪ್ಪ, ಪಕ್ಷದಲ್ಲಿ ಎಲ್ಲಾ ಹುದ್ದೆಯನ್ನು ಅನುಭವಿಸಿ ಈಗ ಪಕ್ಷ ಬಿಟ್ಟದ್ದು ಸರಿಯಲ್ಲ. ಜಗದೀಶ್ ಶೆಟ್ಟರ್ ಮಾಡಿದ ತಪ್ಪಿಗೆ ಕ್ಷಮೆಯೇ ಇಲ್ಲ. ಶೆಟ್ಟರ್ ಪಕ್ಷಕ್ಕೆ ಮಾಡಿದ ದ್ರೋಹ ಇದು. ಶೆಟ್ಟರ್ ರಾಜೀನಾಮೆ ಕೊಟ್ಟದ್ದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಧಾನಿ ಮೋದಿ ಜೊತೆ ಹೆಜ್ಜೆ ಹಾಕೋದು ನಮ್ಮ ಉದ್ದೇಶ. ಪಕ್ಷದ ಸಹಕಾರ ಇಲ್ಲದಿದ್ದರೆ ಯಾರೂ ಬೆಳೆಯಲು ಆಗಲ್ಲ. ಶೆಟ್ಟರ್ ರಾಜೀನಾಮೆಯಿಂದ ಯಾರೂ ವಿಚಲಿತರಾಗುವ ಅವಶ್ಯಕತೆ ಇಲ್ಲ. ಕಾರ್ಯಕರ್ತರು ನಮ್ಮ ಜೊತೆ ಇದ್ದಾರೆ. ಈ ಬಾರಿ ರಾಜ್ಯದಲ್ಲಿ ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವುದೇ ನಮ್ಮ ಗುರಿ ಎಂದು ಗುಡುಗಿದರು.
ಜಗದೀಶ್ ಶೆಟ್ಟರ್ ಗಾಗಲಿ, ಸವದಿಯವರಿಗಾಗಲಿ ಏನು ಕಡಿಮೆ ಮಾಡಿದ್ವಿ? ಜಗದೀಶ್ ಶೆಟ್ಟರ್ ಅವರನ್ನು ಕರೆತಂದು ಪಕ್ಷದಲ್ಲಿ ಎಲ್ಲಾ ಸ್ಥಾನಮಾನ ಕೊಟ್ಟೆವು, ಅವರನ್ನು ಸಿಎಂ ಮಾಡಿದೆವು. ಆದರೂ ಪಕ್ಷ ತೊರೆಯುವ ನಿರ್ಧಾರ ಮಾಡಿದಾಗ ನಿನ್ನೆ, ಮೊನ್ನೆ ರಾಜ್ಯ, ಕೇಂದ್ರ ನಾಯಕರು ಕೇಂದ್ರ ಸಚಿವರನ್ನಾಗಿ ಮಾಡುತ್ತೇವೆ. ರಾಜ್ಯಸಭೆಗೆ ಬರಬಹುದು ಎಂಬ ಹಲವು ಭರವಸೆ ಕೊಟ್ಟರು. ಆದರೂ ಒಪ್ಪದೇ ಇಂದು ರಾಜೀನಾಮೆ ನೀಡಿದ್ದಾರೆ. ಇದು ಸರಿಯಲ್ಲ ಎಂದರು.
ಇನ್ನು ಲಕ್ಷಣ ಸವದಿಯವರು 2018ರ ಚುನಾವಣೆಯಲ್ಲಿ ಸೋತರು. ಆದರೂ ಅವರಿಗೆ ಉಪಮುಖ್ಯಮಂತ್ರಿ ಮಾಡಲಾಯಿತು. ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಲಾಯಿತು. ಅವರಿಗೆ ಇನ್ನೂ ಅವಕಾಶಗಳು ಸಾಕಷ್ಟು ಇತ್ತು. ಆದರೂ ದುಡುಕಿನ ನಿರ್ಧಾರ ಮಾಡಿ ರಾಜೀನಾಮೆ ನೀಡಿದ್ದಾರೆ. ಇಬ್ಬರು ನಾಯಕರ ನಡೆ ಸರಿಯಲ್ಲ ಎಂದು ಕಿಡಿಕಾರಿದರು.