ಕಳೆದ ಕೆಲವು ದಿನಗಳಿಂದ ರಾಜಕಾರಣಿಗಳ ಬಾಯಲ್ಲಿ ‘ರಕ್ತ’ ದ ಮಾತು ಕೇಳಿ ಬರುತ್ತಿತ್ತು. ಕಾಂಗ್ರೆಸ್ ಈ ಬಾರಿ ಅಧಿಕಾರಕ್ಕೆ ಬರುವುದು ಖಚಿತ. ಇದನ್ನು ರಕ್ತದಲ್ಲಿ ಬೇಕಾದರೆ ಬರೆದುಕೊಡುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದು, ಇದಕ್ಕೆ ಬಿಜೆಪಿ, ಜೆಡಿಎಸ್ ನಾಯಕರು ಟಾಂಗ್ ನೀಡಿದ್ದರು.
ಇದರ ಮಧ್ಯೆ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಈ ಬಾರಿ ಹುಬ್ಬಳ್ಳಿ – ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಜಗದೀಶ್ ಶೆಟ್ಟರ್ ನೂರಕ್ಕೆ ನೂರರಷ್ಟು ಗೆಲ್ಲುವುದಾಗಿ ತಮ್ಮ ರಕ್ತದಲ್ಲಿ ಬರೆದಿದ್ದಾರೆ. ಬಿಜೆಪಿಗೆ ದ್ರೋಹ ಮಾಡಿ ಕಾಂಗ್ರೆಸ್ ಸೇರಿರುವ ಶೆಟ್ಟರ್ ಯಾವುದೇ ಕಾರಣಕ್ಕೂ ಗೆಲ್ಲುವುದಿಲ್ಲ. ಇದನ್ನು ರಕ್ತದಲ್ಲಿ ಬರೆದುಕೊಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಕ್ಕೆ ಪ್ರತಿಯಾಗಿ ಅವರು ಈ ರೀತಿ ಮಾಡಿದ್ದಾರೆ.
ಹುಬ್ಬಳ್ಳಿಯ ಬಮ್ಮಾಪುರ ಓಣಿ ನಿವಾಸಿ ಮಂಜುನಾಥ ಈ ರೀತಿ ರಕ್ತದಲ್ಲಿ ಪತ್ರ ಬರೆದವರಾಗಿದ್ದು, ಇವರು ಅಖಿಲ ಭಾರತ ವೀರಶೈವ ಮಹಾಸಭಾ ಕುಂದಗೋಳ ತಾಲೂಕು ಯುವ ಘಟಕದ ಅಧ್ಯಕ್ಷರೂ ಹೌದು. ಮಾನ್ಯ ಜಗದೀಶ್ ಶೆಟ್ಟರ್ ನೂರಕ್ಕೆ ನೂರರಷ್ಟು ವಿಜಯಶಾಲಿ ಆಗುತ್ತಾರೆ. ರಕ್ತದಲ್ಲಿ ಬರೆದುಕೊಡುತ್ತೇನೆ. ಈ ಸಾರಿ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಬರುತ್ತದೆ, ಜೈ ಕಾಂಗ್ರೆಸ್ ಎಂದು ಮಂಜುನಾಥ್ ಬರೆದಿದ್ದು, ಇದರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.