ಮಧ್ಯಪ್ರದೇಶದ ರೈತರೊಬ್ಬರು ಮಾವಿನ ಹಣ್ಣುಗಳನ್ನು ರಕ್ಷಿಸಿಕೊಳ್ಳಲು ಮೂವರು ಭದ್ರತಾ ಸಿಬ್ಬಂದಿ ಮತ್ತು ಆರು ನಾಯಿಗಳನ್ನು ನೇಮಿಸಿಕೊಂಡಿದ್ದಾರೆ. ಇಷ್ಟೆಲ್ಲಾ ಟೈಟ್ ಸೆಕ್ಯೂರಿಟಿ ಮಾಡಿರೋದಕ್ಕೆ ಕಾರಣ ಏನ್ ಗೊತ್ತಾ? ಆ ಮಾವಿನ ಹಣ್ಣಿನ ಬೆಲೆ ಪ್ರತಿ ಕೆಜಿಗೆ 2.7 ಲಕ್ಷ ರೂಪಾಯಿ.
ಅಂತಹ ಅತ್ಯಮೂಲ್ಯವಾದ ಮಿಯಾಝಾಕಿ ಎಂಬ ಜಪಾನಿ ತಳಿಯ ಮಾವು ಇದು. ಮಾವಿನ ಹಣ್ಣುಗಳು ಸುಂದರ ರೂಬಿ ಬಣ್ಣದಲ್ಲಿವೆ. ಮಧ್ಯಪ್ರದೇಶದ ಜಬಲ್ಪುರದಲ್ಲಿ ಪರಿಹಾರ್ ಎಂಬ ರೈತನ ತೋಟದಲ್ಲಿ ಮಿಯಾಝಾಕಿ ಜಾತಿಗೆ ಸೇರಿದ ಎರಡು ಮಾವಿನ ಮರಗಳಿವೆ.
ಈ ಮರಗಳಲ್ಲಿರೋ ಮಾವಿನ ಕಾಯಿಗಳ ರಕ್ಷಣೆಗಾಗಿ ಈತ ಮೂವರು ಭದ್ರತಾ ಸಿಬ್ಬಂದಿ ಮತ್ತು 6 ನಾಯಿಗಳನ್ನು ನೇಮಿಸಿಕೊಂಡಿದ್ದಾರೆ. ರೈತ ಸಂಕಲ್ಪ್ ಪರಿಹಾರ್ ಮತ್ತು ಅವರ ಪತ್ನಿ ರಾಣಿ, ಮಾವಿನ ಮರಗಳನ್ನು ನೆಟ್ಟು ಪೋಷಿಸಿದ್ದರು. ಆದ್ರೆ ಇದು ಅಪರೂಪದ ಜಪಾನಿ ತಳಿಯ ಮಾವು ಅನ್ನೋದು ಅವರಿಗೆ ಗೊತ್ತಿರಲಿಲ್ಲ. ಇದು ವಿಶ್ವದ ಅತ್ಯಂತ ದುಬಾರಿ ಮಾವಿನ ಹಣ್ಣುಗಳಲ್ಲಿ ಒಂದಾಗಿದೆ.
ಮಿಯಾಝಾಕಿ ಮಾವಿನ ಹಣ್ಣುಗಳನ್ನು ಅವುಗಳ ಆಕಾರ ಮತ್ತು ಕೆಂಪು ಬಣ್ಣದ ಕಾರಣಕ್ಕೆ ಸೂರ್ಯನ ಮೊಟ್ಟೆಗಳು ಎಂದು ಕರೆಯಲಾಗುತ್ತದೆ. ಈ ವಿದೇಶಿ ಹಣ್ಣಿನ ಬಗ್ಗೆ ಗೊತ್ತಾಗಿದ್ದೇ ತಡ ಸ್ಥಳೀಯ ಕಳ್ಳರು ತೋಟಕ್ಕೆ ನುಗ್ಗಿ ಮಾವಿನ ಸಸಿಗಳನ್ನು ಕದಿಯಲು ಪ್ರಯತ್ನಿಸಿದ್ದಾರೆ. ಮಿಯಾಝಾಕಿ ಮಾವಿನ ಹಣ್ಣುಗಳು ಜಪಾನ್‌ನ ನಗರದಿಂದ ತಮ್ಮ ಹೆಸರನ್ನು ಪಡೆದುಕೊಂಡಿವೆ, ಅಲ್ಲಿ ಅವುಗಳನ್ನು ಬೆಳೆಯಲಾಗುತ್ತದೆ.
ಒಂದು ಹಣ್ಣು ಸರಾಸರಿ ಸುಮಾರು 350 ಗ್ರಾಂ ತೂಕವಿರುತ್ತದೆ. ಇವುಗಳಲ್ಲಿ ಉತ್ಕರ್ಷಣ ನಿರೋಧಕ ಅಂಶಗಳಿವೆ. ಬೀಟಾ-ಕ್ಯಾರೋಟಿನ್ ಮತ್ತು ಫೋಲಿಕ್ ಆಮ್ಲದಲ್ಲಿ ಸಮೃದ್ಧವಾಗಿದೆ. ಈ ಮಾವಿನ ಹಣ್ಣುಗಳನ್ನು ಏಪ್ರಿಲ್ ಮತ್ತು ಆಗಸ್ಟ್ ನಡುವಿನ ಸಮಯದಲ್ಲಿ ಬೆಳೆಯಲಾಗುತ್ತದೆ.