ಏನನ್ನಾದರೂ ಸಾಧಿಸಬೇಕು ಅನ್ನೋ ಉತ್ಸಾಹ, ಛಲ ಇದ್ದರೆ ಅಸಾಧ್ಯವಾದುದ್ದನ್ನೂ ಮಾಡಬಹುದು. ಇಂಡೋನೇಷ್ಯಾದ 16 ವರ್ಷದ ಆರ್ಯ ಪರ್ಮಾನಾ ಎಂಬ ಬಾಲಕನೇ ಇದಕ್ಕೆ ನಿದರ್ಶನ. ಇಷ್ಟು ಚಿಕ್ಕವಯಸ್ಸಿನಲ್ಲೇ ಆತನಲ್ಲಿರುವ ಚೈತನ್ಯ ಎಲ್ಲರಿಗೂ ಸ್ಪೂರ್ತಿ ತುಂಬುವಂತಿದೆ. ಸುಮಾರು 6 ವರ್ಷಗಳ ಹಿಂದೆ ಆರ್ಯ ಪರ್ಮಾನಾ ವಿಶ್ವದ ಅತ್ಯಂತ ದಪ್ಪ ಹುಡುಗ ಎಂದು ಗುರುತಿಸಲ್ಪಟ್ಟಿದ್ದ. ಅವನ ತೂಕ 190 ಕೆಜಿಯಷ್ಟಿತ್ತು. 6 ವರ್ಷಗಳ ಕಠಿಣ ಪರಿಶ್ರಮದಿಂದ ಈಗ ಆತ ತೂಕವನ್ನು 87 ಕೆಜಿಗೆ ಇಳಿಸಿದ್ದಾನೆ.
ಫಿಟ್ನೆಸ್ ಬಗ್ಗೆ ಹೆಚ್ಚು ಗಮನ ಕೊಡ್ತಿದ್ದಾನೆ. ಬಾಲಕ ದೇಹ ಪರಿವರ್ತನೆ ಮಾಡಿದ್ದೇ ಒಂದು ವಿಸ್ಮಯಕಾರಿ ಜರ್ನಿ. ನಿಯಮಿತ ವ್ಯಾಯಾಮ ಮತ್ತು ಆಹಾರದ ಹೆಚ್ಚು ಗಮನ ಕೇಂದ್ರೀಕರಿಸಿ ಆರ್ಯ ತೂಕ ಇಳಿಸಿಕೊಂಡಿದ್ದಾನೆ. ಸೆಲೆಬ್ರಿಟಿ ಟ್ರೈನರ್ ಅಡೆ ರೈ ಬಾಲಕನಿಗೆ ಸಹಾಯ ಮಾಡಿದ್ದಾರೆ. 2016ರಿಂದ್ಲೇ ಬಾಲಕನ ತೂಕ ಇಳಿಸಲು ಸರಿಯಾದ ಡಯಟ್ ಹಾಗೂ ವ್ಯಾಯಾಮ ಮಾಡಿಸಲು ಆರಂಭಿಸಿದ್ರು. ಇವೆಲ್ಲವೂ ನಿಧಾನವಾಗಿ ಬಾಲಕನ ಮೇಲೆ ಪರಿಣಾಮ ಬೀರಿದೆ.
ಹೆಚ್ಚುವರಿ ಮಾಂಸವನ್ನು ತೆಗೆದುಹಾಕಲು ಶಸ್ತ್ರಚಿಕಿತ್ಸೆಯನ್ನೂ ಮಾಡಲಾಗಿದೆ. ಆರ್ಯ ತೂಕ ಕಡಿಮೆ ಮಾಡಿಕೊಂಡ ಬಳಿಕ ಆತನ ದೇಹದಿಂದ ಹೆಚ್ಚುವರಿ ಮಾಂಸವನ್ನು ತೆಗೆದುಹಾಕುವುದೇ ಸಮಸ್ಯೆಯಾಗಿತ್ತು. ಇದಕ್ಕಾಗಿ ಬ್ಯಾರಿಯಾಟ್ರಿಕ್ ಸರ್ಜರಿ ಮಾಡಲಾಗಿದೆ. ಈ ಶಸ್ತ್ರಚಿಕಿತ್ಸೆಯ ಸಹಾಯದಿಂದ ಹೊಟ್ಟೆ ಚಿಕ್ಕದಾಯಿತು. ಈಗ ಆರ್ಯನ ತೂಕ ಸುಮಾರು 87 ಕೆ.ಜಿ. ಅತಿಯಾದ ತೂಕದ ಕಾರಣಕ್ಕೆ ಬಾಲಕ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ. ವಿಶ್ವದ ಅತ್ಯಂತ ದಪ್ಪನೆಯ ಬಾಲಕನೆಂದು ಕರೆಸಿಕೊಂಡಿದ್ದ. ಆತನ ವಿಡಿಯೋ ನೋಡಿದ ಇಂಡೋನೇಷಿಯಾದ ಸಂಸದ ದೇದಿ ಮುಲಾಡಿ ಬಾಲಕನನ್ನು ಭೇಟಿ ಕೂಡ ಆಗಿದ್ದರು. ಇದೀಗ ಬಾಲಕನ ವೇಯ್ಟ್ ಲಾಸ್ ಜರ್ನಿ ಕೂಡ ವೈರಲ್ ಆಗ್ತಿದೆ.