
ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದ ಮೇರಿ ತನ್ನ ಗಂಡನ ಸಾವಿನ ನಂತರ ಜೀವನೋಪಾಯಕ್ಕಾಗಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ನಾಲ್ಕು ಮಕ್ಕಳನ್ನು ಸಲಹಲು ಆಕೆ ಹಗಲು-ರಾತ್ರಿ ಒಂದು ಮಾಡಿದಳು. ಈ ನಡುವೆಯೇ ಆಕೆ ಅಕ್ರೊಮೆಗಾಲಿ ಎಂಬ ಹಾರ್ಮೋನ್ ಅಸ್ವಸ್ಥತೆಯಿಂದ ಬಳಲುತ್ತಿದ್ದಳು. ಮುಖವು ಒಂದು ರೀತಿ ವಿಕಾರ ರೂಪ ತಳೆಯಲು ಶುರುವಾಯಿತು.
ಇದೇ ಸಂದರ್ಭದಲ್ಲಿ ನಡೆದ ಕುರೂಪಿ ಮಹಿಳೆ (ಅಗ್ಲಿಯೆಸ್ಟ್ ವುಮೆನ್) ಸ್ಪರ್ಧೆಯಲ್ಲಿ ಭಾಗವಹಿಸಿದಳು. ಕೆಟ್ಟ ಮುಖದಿಂದಾಗಿ ಸ್ಪರ್ಧೆಯಲ್ಲಿ ಗೆದ್ದಳು. ನಂತರ ಸರ್ಕಸ್ ಕಂಪೆನಿಯೊಂದು ಆಕೆಗೆ ಆಹ್ವಾನ ಕೊಟ್ಟಿತು. ಹೀಗೆ ಗುರುತಿಸಿಕೊಂಡರೆ ಯಾರಾದರೂ ತನಗೆ ಕೆಲಸ ಕೊಡಬಹುದು ಎನ್ನುವ ಅವಳ ಆಸೆ ಈಡೇರಿತ್ತು. ಅಲ್ಲಿ ಕೂಡ ಆಕೆಯನ್ನು ಕುರೂಪಿ ಮಹಿಳೆ ಎಂದೇ ಗುರುತಿಸಿ ನೇಮಕ ಮಾಡಿಕೊಳ್ಳಲಾಗಿತ್ತು. ಜೀವನ ಪರ್ಯಂತ ಎಲ್ಲರಿಂದ ಅಪಹಾಸ್ಯಕ್ಕೆ ಒಳಗಾಗಿಯೇ ಸಂಸಾರ ನೂಕಿದಳು ಮೇರಿ. ಆದರೆ ನಾಲ್ಕು ಮಕ್ಕಳ ಜವಾಬ್ದಾರಿಯನ್ನು ನಿಭಾಯಿಸಬಲ್ಲಳಾದಳು. ಗ್ರೀಫ್ ಹಿಸ್ಟರಿ ಎಂಬ ಪುಸ್ತಕವು ಈಕೆಯನ್ನು ‘ಅದ್ಭುತ ತಾಯಿ’ ಎಂದು ನೆನಪಿಸಿಕೊಂಡಿದೆ.