ಐಸ್ ಕ್ರೀಮ್ ಬೇಸಿಗೆಯಲ್ಲಿ ಎಲ್ಲಾ ವಯೋಮಾನದವರೂ ಆನಂದಿಸುವ ನೆಚ್ಚಿನ ತಿನಿಸು. ಐಸ್‌ಕ್ರೀಂನಲ್ಲಿ ಸಾಕಷ್ಟು ವೆರೈಟಿಗಳಿವೆ. ಪ್ರತಿಯೊಬ್ಬರಿಗೂ ಅವರದೇ ಫೇವರಿಟ್ ಫ್ಲೇವರ್‌ಗಳಿವೆ. ತಮ್ಮ ನೆಚ್ಚಿನ ಬ್ರ್ಯಾಂಡ್‌ಗಳು ಮತ್ತು ಅಭಿರುಚಿಗಳನ್ನು ಹೊಂದಿದ್ದಾರೆ.
ಕೆಲವರಿಗೆ ಮ್ಯಾಂಗೋ ಫ್ಲೇವರ್ ಇಷ್ಟವಾದ್ರೆ ಇನ್ನು ಕೆಲವರಿಗೆ ವೆನಿಲ್ಲಾ ಐಸ್ ಕ್ರೀಂ ಬಹಳ ಪ್ರಿಯವಾಗಿದೆ. ಆದರೆ ನಾವು ನಿಮಗೆ ಹೇಳಲು ಹೊರಟಿರುವುದು ವಿಶ್ವದ ಅತ್ಯಂತ ದುಬಾರಿ ಐಸ್ ಕ್ರೀಂ. ಜಪಾನ್‌ನಲ್ಲಿ ವಿಶ್ವದ ಅತ್ಯಂತ ದುಬಾರಿ ಐಸ್ ಕ್ರೀಂ ತಯಾರಾಗಿದೆ.
ಒಂದು ಸ್ಕೂಪ್ ಐಸ್ ಕ್ರೀಂ ಖರೀದಿಸುವ ಮೊತ್ತದಲ್ಲಿ ಜನರು ಒಂದಲ್ಲ ಎರಡಲ್ಲ ಆರು ಸ್ಕೂಟಿಗಳನ್ನು ಕೊಂಡುಕೊಳ್ಳಬಹುದು, ಅಷ್ಟಿದೆ ಈ ಐಸ್‌ಕ್ರೀಂನ ಬೆಲೆ. ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಜಪಾನಿನ ಕಂಪನಿಯೊಂದು ವಿಶ್ವದ ಅತ್ಯಂತ ದುಬಾರಿ ಐಸ್ ಕ್ರೀಮ್ ಅನ್ನು ತಯಾರಿಸಿದೆ. ಇದರ ಬೆಲೆ 8,73,400 ಜಪಾನೀಸ್ ಯೆನ್, ಸುಮಾರು 5.2 ಲಕ್ಷ ರೂಪಾಯಿ. ಸೆಲಾಟೊ ಹೆಸರಿನ ಬ್ರಾಂಡ್ ಈ ವಿಶೇಷ ಸಿಹಿ ತಿನಿಸನ್ನು ಸಿದ್ಧಪಡಿಸಿದೆ. ಇದರಲ್ಲಿ ಹಲವು ಅಪರೂಪದ ಹಾಗೂ ದುಬಾರಿ ವಸ್ತುಗಳನ್ನು ಬಳಸಿದ್ದಾರೆ.
ವಾಸ್ತವವಾಗಿ ಈ ಐಸ್ ಕ್ರೀಂನಲ್ಲಿ ಇಟಲಿಯ ಆಲ್ಬಾದಲ್ಲಿ ಕಂಡುಬರುವ ಬಿಳಿ ಟ್ರಫಲ್ ಅನ್ನು ಸೇರಿಸಲಾಗಿದೆ, ಇದರ ಬೆಲೆ ಪ್ರತಿ ಕಿಲೋಗ್ರಾಂಗೆ 2 ಮಿಲಿಯನ್ ಜಪಾನೀಸ್ ಯೆನ್, ಅಂದರೆ ಸುಮಾರು 12 ಲಕ್ಷ ರೂಪಾಯಿ.ಇದರೊಂದಿಗೆ ಪರ್ಮಿಜಿಯಾನೊ ರೆಗ್ಜಿಯಾನೊ ಮತ್ತು ಸೇಕ್ ಲೀ ಅನ್ನು ಐಸ್ ಕ್ರೀಂಗೆ ಸೇರಿಸಲಾಗಿದೆ. ಇದರಿಂದಾಗಿ ಈ ಐಸ್ ಕ್ರೀಂಗೆ ಚಿನ್ನದ ಬೆಲೆ ಬಂದಿದೆ.
ಸೆಲಾಟೊ ಬ್ರ್ಯಾಂಡ್ ಯುರೋಪಿಯನ್ ಮತ್ತು ಜಪಾನೀಸ್ ಅಂಶಗಳನ್ನು ಸಂಯೋಜಿಸುವ ವಿಶಿಷ್ಟವಾದ ಐಸ್ ಕ್ರೀಂ ಅನ್ನು ಸಿದ್ಧಪಡಿಸಿದೆ. ಇದಕ್ಕಾಗಿ ಅವರು ಒಸಾಕಾದ ಜನಪ್ರಿಯ ಫ್ಯೂಷನ್ ರೆಸ್ಟೋರೆಂಟ್ ರಿವಿಯ ಮುಖ್ಯ ಬಾಣಸಿಗ ತಡಾಯೋಶಿ ಯಮಡಾ ಅವರ ಸಹಾಯವನ್ನು ಪಡೆದರು. ಈ ರೆಸಿಪಿ ಪೂರ್ತಿಯಾಗಿ ಸಿದ್ಧವಾಗಲು ಒಂದೂವರೆ ವರ್ಷಗಳೇ ಬೇಕಾಯಿತು.