ವಿಶ್ವಾದ್ಯಂತ ಆಲ್ಫಾ , ಬೀಟಾ ಹಾಗೂ ಮಾರಣಾಂತಿಕ ಡೆಲ್ಟಾಗಳನ್ನು ಹಿಂದಿಕ್ಕಿರುವ ಓಮಿಕ್ರಾನ್ ರೂಪಾಂತರಿಯು ಜಗತ್ತಿನೆಲ್ಲೆಡೆ ಮಿಂಚಿನ ವೇಗದಲ್ಲಿ ವ್ಯಾಪಿಸಿದೆ. ಇದು ಜನರಲ್ಲಿ ಅತ್ಯಂತ ವೇಗವಾಗಿ ಹರಡುವ ರೂಪಾಂತರಿಯಾಗಿರುವ ಹಿನ್ನೆಲೆಯಲ್ಲಿ ಸೋಂಕಿನ ಬಗ್ಗೆ ಜಾಗೃತೆ ವಹಿಸುವಂತೆ ವಿಶ್ವ ಆರೋಗ್ಯ ಸಂಸ್ಥೆಯು ಎಚ್ಚರಿಕೆಯನ್ನು ನೀಡಿದೆ.
ಸಂದರ್ಶನವೊಂದರಲ್ಲಿ ಓಮಿಕ್ರಾನ್ ರೂಪಾಂತರಿಯ ವಿಚಾರವಾಗಿ ಮಾತನಾಡಿದ ವಿಶ್ವ ಆರೋಗ್ಯ ಸಂಸ್ಥೆಯ ಟೆಕ್ನಿಕಲ್ ಹೆಡ್ ವ್ಯಾನ್ ಕೆರ್ಕೋವ್ ಓಮಿಕ್ರಾನ್ ರೂಪಾಂತರಿಯು ಡೆಲ್ಟಾ ರೂಪಾಂತರಿಗಿಂತ ಕಡಿಮೆ ತೀವ್ರತೆಯನ್ನು ಹೊಂದಿದೆ. ಆದರೆ ಇದು ಹಿಂದಿನ ಎಲ್ಲಾ ಕೋವಿಡ್ ರೂಪಾಂತರಿಗಳಂತೆಯೇ ಮಾರಣಾಂತಿಕ ಕಾಯಿಲೆಗೆ ಕಾರಣವಾಗಬಹುದು ಎಂದು ಇದೇ ವೇಳೆ ಹೇಳಿದ್ದಾರೆ.
ಹಿರಿಯ ನಾಗರಿಕರು, ಕೋವಿಡ್ ಲಸಿಕೆಯನ್ನು ಸ್ವೀಕರಿಸದೇ ಇರುವವರು, ಈಗಾಗಲೇ ಬೇರೆ ಕಾಯಿಲೆಗಳಿಂದ ಬಳಲುತ್ತಿರುವವರು ಓಮಿಕ್ರಾನ್ ರೂಪಾಂತರಿಯ ಸಂಪರ್ಕಕ್ಕೆ ಬಂದಲ್ಲಿ ಇಂತವರಲ್ಲಿ ಮಾರಣಾಂತಿಕ ಲಕ್ಷಣಗಳು ಗೋಚರಿಸುವ ಸಾಧ್ಯತೆ ದಟ್ಟವಾಗಿದೆ ಎಂದು ಕೆರ್ಕೋವ್ ಹೇಳಿದ್ದಾರೆ.
ಇನ್ನು ಮಾನವ ಸಂಕುಲದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಗೂ ಓಮಿಕ್ರಾನ್ ತಗಲುತ್ತದೆಯೇ ಎಂಬ ಪ್ರಶ್ನೆಗೂ ಇದೇ ವೇಳೆ ಉತ್ತರಿಸಿದ ಕೆರ್ಕೋವ್, ಓಮಿಕ್ರಾನ್ ರೂಪಾಂತರಿಯು ಡೆಲ್ಟಾಗಿಂತಲೂ ಅತ್ಯಂತ ವೇಗವಾಗಿ ಹರಡುತ್ತಿದೆ. ಅಲ್ಲದೇ ಇದು ಜನರ ನಡುವೆ ಅತ್ಯಂತ ವೇಗವಾಗಿ ವ್ಯಾಪಿಸುತ್ತದೆ. ಪ್ರಪಂಚದಲ್ಲಿ ಕೊರೊನಾ ಪ್ರಕರಣಗಳು ಅಧಿಕವಾಗಿದ್ದರೂ ಸಹ ಪ್ರಪಂಚದಲ್ಲಿರುವ ಪ್ರತಿಯೊಬ್ಬರಿಗೂ ಕೊರೊನಾ ಸೋಂಕು ತಗಲುತ್ತದೆ ಎಂದು ಹೇಳಲು ಆಗುವುದಿಲ್ಲ ಎಂದು ಹೇಳಿದರು.