ಮಹಿಳೆಯರ ಟೆಸ್ಟ್ ಕ್ರಿಕೆಟ್ಗೆ ಪಾದರ್ಪಣೆ ಮಾಡುತ್ತಲೇ ದಾಖಲೆಗಳನ್ನ ನಿರ್ಮಿಸುತ್ತಿರೋ ಶಫಾಲಿ ವರ್ಮಾ ಯುವಜನತೆಯ ಮನಸ್ಸು ಕದಿಯುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಟೆಸ್ಟ್ ಜೀವನಕ್ಕೆ ಪಾದಾರ್ಪಣೆ ವಿಚಾರವಾಗಿ ಮಂಗಳವಾರ ಮಾತನಾಡಿದ ಅವರು ನಾನು ಯಾವತ್ತಿಗೂ ನನ್ನ ವಯಸ್ಸಿನ ಬಗ್ಗೆ ಯೋಚನೆಯನ್ನೇ ಮಾಡೋದಿಲ್ಲ ಎಂದು ಹೇಳಿದ್ದಾರೆ.
ಕೇವಲ 17 ವರ್ಷ ಪ್ರಾಯದ ಶಫಾಲಿ ವರ್ಮಾ ತಮ್ಮ ಚೊಚ್ಚಲ ಪಂದ್ಯದಲ್ಲಿ 96 ರನ್ಗಳನ್ನ ಗಳಿಸುವ ಮೂಲಕ ಮೊದಲ ಪಂದ್ಯದಲ್ಲಿಯೇ ಅತೀ ಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರ್ತಿ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಈ ಮೂಲಕ ಶಫಾಲಿ 1995ರಲ್ಲಿ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ 75 ರನ್ಗಳನ್ನ ಗಳಿಸಿದ್ದ ಚಂದೇರ್ಕಾಂತಾ ಕೌಲ್ರ ದಾಖಲೆಯನ್ನ ಸರಿಗಟ್ಟಿದ್ದಾರೆ.
ದೊಡ್ಡ ದೊಡ್ಡ ಪಂದ್ಯಾವಳಿಗಳನ್ನ ಆಡುವ ವೇಳೆ ನಾನು ಎಂದಿಗೂ ಆತ್ಮವಿಶ್ವಾಸದಿಂದಲೇ ಇರುತ್ತೇನೆ. ನಾನು ಎಂದಿಗೂ ನನ್ನ ವಯಸ್ಸನ್ನ ಲೆಕ್ಕ ಹಾಕಲು ಹೋಗೋದೇ ಇಲ್ಲ. ನನ್ನ ತಂಡಕ್ಕೆ ನನ್ನಿಂದ ಏನು ಕೊಡುಗೆಯನ್ನ ನೀಡಬಹುದು ಅನ್ನೋದಷ್ಟೇ ನನ್ನ ತಲೆಯಲ್ಲಿ ಇರುತ್ತದೆ ಎಂದು ಹೇಳಿದ್ದಾರೆ.
ಸ್ಮೃತಿ ಮಂದಾನ ಜೊತೆಯಲ್ಲಿ ಕ್ರೀಸಿಗೆ ಇಳಿದಿದ್ದ ಶಫಾಲಿ 96 ರನ್ಗಳನ್ನ ಗಳಿಸುವಲ್ಲಿ ಯಶಸ್ವಿಯಾಗಿದ್ದರೆ ಸ್ಮೃತಿ 78 ರನ್ಗಳನ್ನ ಗಳಿಸುವಲ್ಲಿ ಶಕ್ತರಾದರು. ಇಬ್ಬರು ಆಟಗಾರರು 167 ರನ್ಗಳ ಜೊತೆಯಾಟ ಆಡುವ ಮೂಲಕ ದೇಶದಲ್ಲಿ ಅತೀ ಹೆಚ್ಚು ರನ್ ಸಂಪಾದಿಸಿದ ಆರಂಭಿಕ ಆಟಗಾರರು ಎಂಬ ಸಾಧನೆಯನ್ನೂ ಮಾಡಿದ್ದಾರೆ.
1984ರಲ್ಲಿ ಮುಂಬೈನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಗಾರ್ಗಿ ಬ್ಯಾನರ್ಜಿ ಹಾಗೂ ಸಂಧ್ಯಾ ಅಗರ್ವಾಲ್ ಆರಂಭಿಕ ಆಟಗಾರರಾಗಿ ಕಣಕ್ಕಿಳಿಯುವ ಮೂಲಕ 153 ರನ್ಗಳ ಜೊತೆಯಾಟ ಆಡಿದ್ದರು. ಇದೀಗ ಈ ದಾಖಲೆಯನ್ನ ಸ್ಮೃತಿ ಹಾಗೂ ಶಫಾಲಿ ಹಿಂದಿಕ್ಕಿದ್ದಾರೆ.