ಡಿಎಂಕೆ ಪಕ್ಷವು 28 ವರ್ಷದ ಪ್ರಿಯಾರನ್ನು ಚೆನ್ನೈ ಕಾರ್ಪೋರೇಷನ್ಗೆ ಮೇಯರ್ ಅಭ್ಯರ್ಥಿಯಾಗಿ ನಾಮನಿರ್ದೇಶನ ಮಾಡಿದೆ. ಚೆನ್ನೈ ಪಾಲಿಕೆಯಲ್ಲಿ ಡಿಎಂಕೆ ಬಹುಮತ ಹೊಂದಿರುವ ಹಿನ್ನೆಲೆಯಲ್ಲಿ ಪ್ರಿಯಾ ಶೀಘ್ರದಲ್ಲಿಯೇ ಮೇಯರ್ ಆಗಿ ಅಧಿಕೃತವಾಗಿ ನೇಮಕಗೊಳ್ಳಲಿದ್ದಾರೆ.
ಈ ಮೂಲಕ ಚೆನ್ನೈನಲ್ಲಿ ಮೇಯರ್ ಹುದ್ದೆಯನ್ನು ಅಲಂಕರಿಸಿದ ಮೊದಲ ದಲಿತ ಹಾಗೂ ಅತ್ಯಂತ ಕಿರಿಯ ಮಹಿಳೆ ಎಂಬ ಖ್ಯಾತಿಗೆ ಪ್ರಿಯಾ ಪಾತ್ರರಾಗಲಿದ್ದಾರೆ. ಅಲ್ಲದೇ ಚೆನ್ನೈ ಇತಿಹಾಸದಲ್ಲಿಯೇ ಮೇಯರ್ ಹುದ್ದೆಯನ್ನು ಅಲಂಕರಿಸಿದ ಮೂರನೇ ಮಹಿಳೆ ಎಂಬ ಕೀರ್ತಿ ಕೂಡ ಇವರದ್ದಾಗಿರಲಿದೆ. ಈ ಹಿಂದೆ ತಾರಾ ಚೆರಿಯನ್ ಹಾಗೂ ಕಾಮಾಕ್ಷಿ ಜಯರಾಮ್ ಈ ಹುದ್ದೆಯನ್ನು ಅಲಂಕರಿಸಿದ್ದರು.
ಉತ್ತರ ಚೆನ್ನೈನ ತಿರುವಿ ಕಾ ನಗರದಿಂದ ಆರ್ ಪ್ರಿಯಾ ಅವರು ಟಿಎನ್ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ವಾರ್ಡ್ ಸಂಖ್ಯೆ 74 ರಿಂದ ಗೆದ್ದಿದ್ದಾರೆ. ಗ್ರೇಟರ್ ಚೆನ್ನೈ ಕಾರ್ಪೊರೇಶನ್ ಸೇರಿದಂತೆ ಎಲ್ಲಾ 21 ಮುನ್ಸಿಪಲ್ ಕಾರ್ಪೊರೇಷನ್ಗಳಲ್ಲಿ ಡಿಎಂಕೆ ಬಹುಮತ ಸಂಪಾದಿಸಿದೆ.