ನೌಕರರಿಗೆ ವೇತನ ಪಾವತಿಸುವ ಸಲುವಾಗಿ ಚೆಕ್ ಗಳಿಗೆ ಡಾ. ಶಿವಮೂರ್ತಿ ಮುರುಘಾ ಶರಣರಿಗೆ ಸಹಿ ಮಾಡಲು ಅನುಮತಿ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತಿರಸ್ಕರಿಸಿದೆ.
ಮುರುಘಾ ಮಠದಿಂದ ನಡೆಸಲಾಗುತ್ತಿರುವ ಎಸ್.ಜೆ.ಎಂ. ವಿದ್ಯಾಪೀಠದ ಸುಮಾರು 5000 ನೌಕರರಿಗೆ ವೇತನ ಪಾವತಿಸುವ ಸಲುವಾಗಿ ಚೆಕ್ ಮೇಲೆ ಶಿವಮೂರ್ತಿ ಶರಣರ ಸಹಿ ಅಗತ್ಯವಾಗಿದೆ ಎಂದು ಅವರ ಪರ ವಕೀಲರು ವಾದ ಮಂಡಿಸಿದ್ದರು.
ಆದರೆ ಸರ್ಕಾರಿ ಅಭಿಯೋಜಕರಾದ ನಾಗವೇಣಿ ಇದಕ್ಕೆ ಆಕ್ಷೇಪಿಸಿ, ಕಾರಾಗೃಹದಲ್ಲಿರುವವರಿಗೆ ಸಹಿ ಮಾಡುವ ಅಧಿಕಾರ ಕೊಟ್ಟರೆ ಮುಂದಿನ ದಿನಗಳಲ್ಲಿ ಶ್ರೀಮಠದ ಅಸ್ತಿಪಾಸ್ತಿಗಳಿಗೆ ತೊಂದರೆಯಾಗುವ ಸಾಧ್ಯತೆ ಇದೆ. ಈಗಾಗಲೇ ಪ್ರಭಾರಿ ಸ್ವಾಮೀಜಿ ಹಾಗೂ ಆಡಳಿತಾಧಿಕಾರಿಯನ್ನು ನೇಮಿಸಲಾಗಿದ್ದು, ಹೀಗಾಗಿ ಮುರುಘಾ ಶರಣರಿಗೆ ಚೆಕ್ ಗೆ ಸಹಿ ಮಾಡಲು ಅಧಿಕಾರ ನೀಡುವ ಅಗತ್ಯ ಇಲ್ಲ ಎಂದು ಪ್ರತಿವಾದ ಮಾಡಿದ್ದರು.
ಬಳಿಕ ನ್ಯಾಯಾಧೀಶರಾದ ಬಿ.ಕೆ. ಕೋಮಲ, ಚೆಕ್ ಮೇಲೆ ಶಿವಮೂರ್ತಿ ಮುರುಘಾ ಶರಣರು ಸಹಿ ಮಾಡಲು ಅನುಮತಿ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ತಿರಸ್ಕರಿಸಿದ್ದರು.