‘ಮುಂಗಾರು’ ಆರಂಭವಾಗಿ ಹಲವು ದಿನಗಳೇ ಕಳೆದಿದ್ದರೂ ಸಹ ರಾಜ್ಯದಲ್ಲಿ ವ್ಯಾಪಕ ಪ್ರಮಾಣದ ಮಳೆಯಾಗಿರಲಿಲ್ಲ. ಮೋಡ ಮುಸುಕಿದ ವಾತಾವರಣವಿರುತ್ತಿತ್ತಾದರೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಸುರಿಯದ ಕಾರಣ ಇದು ರೈತ ಸಮುದಾಯವನ್ನು ಆತಂಕಕ್ಕೀಡು ಮಾಡಿತ್ತು.
ತಮ್ಮ ಹೊಲಗದ್ದೆಗಳನ್ನು ಹಸನು ಮಾಡಿಕೊಂಡು ಬಿತ್ತನೆಗೆ ಸಿದ್ಧರಾಗಿದ್ದ ರೈತರು ಮಳೆ ಕೈಕೊಟ್ಟ ಕಾರಣ ತಲೆ ಮೇಲೆ ಕೈ ಹೊತ್ತು ಕುಳಿತಿದ್ದರು. ಆದರೆ ಇದೀಗ ಮುಂಗಾರು ಚುರುಕು ಪಡೆದುಕೊಂಡಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಇದರಿಂದ ರೈತ ಸಮುದಾಯದ ಮೊಗದಲ್ಲಿ ಮಂದಹಾಸ ಮೂಡಲು ಕಾರಣವಾಗಿದೆ.
ಮುಂದಿನ ದಿನಗಳಲ್ಲಿ ಮುಂಗಾರು ಮತ್ತಷ್ಟು ಚುರುಕು ಪಡೆದುಕೊಳ್ಳಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದ್ದು, ಇದರಿಂದ ಕೆರೆಕಟ್ಟೆಗಳು, ಹಳ್ಳಕೊಳ್ಳಗಳು, ಜಲಾಶಯಗಳು ತುಂಬಲಿವೆ. ಜಲಾಶಯಗಳು ಭರ್ತಿಯಾದರೆ ವಿದ್ಯುತ್ ಉತ್ಪಾದನೆಗೂ ಇದು ಸಹಕಾರಿಯಾಗಲಿದೆ.