ಚುಮು ಚುಮು ಚಳಿಯಲ್ಲಿ ಬಿಸಿ ಬಿಸಿ ಚಹಾದ ಜೊತೆಗೆ ಪಕೋಡಾ ಇದ್ರೆ ಸ್ವರ್ಗಕ್ಕೆ ಕಿಚ್ಚು ಹಚ್ಚಿದಂತಿರುತ್ತೆ. ಅದ್ರಲ್ಲೂ ಪನೀರ್ ಪಕೋಡಾದ ಮಜಾನೇ ಬೇರೆ. ಗರಿಗರಿಯಾದ ಪನೀರ್ ಪಕೋಡಾವನ್ನು ಮಾಡೋದು ಕೂಡ ಬಹಳ ಸುಲಭ.
ಬೇಕಾಗುವ ಸಾಮಗ್ರಿ : 1 ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಅರ್ಧ ಚಮಚ ಅಚ್ಚಖಾರದ ಪುಡಿ, ಮುಕ್ಕಾಲು ಚಮಚದಷ್ಟು ಚಾಟ್ ಮಸಾಲ, 1 ಚಮಚ ಕಸೂರಿ ಮೇಥಿ, ಕಾಲು ಚಮಚ ಉಪ್ಪು, 9 ಪನೀರ್ ಕ್ಯೂಬ್ಸ್.
ಮುಕ್ಕಾಲು ಕಪ್ ನಷ್ಟು ಕಡಲೆಹಿಟ್ಟು, 2 ಚಮಚ ಅಕ್ಕಿ ಹಿಟ್ಟು, ಕಾಲು ಚಮಚ ಅರಿಶಿನ, ಕಾಲು ಚಮಚ ಅಚ್ಚಖಾರದ ಪುಡಿ, ಚಿಟಿಕೆ ಇಂಗು, ಕಾಲು ಚಮಚ ಚಾಟ್ ಮಸಾಲ, ಕಾಲು ಚಮಚ ಉಪ್ಪು, ಅರ್ಧ ಕಪ್ ನೀರು, ಕರಿಯಲು ಎಣ್ಣೆ.
ಮಾಡುವ ವಿಧಾನ : ದೊಡ್ಡ ಬೌಲ್ ನಲ್ಲಿ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಅಚ್ಚಖಾರದ ಪುಡಿ, ಚಾಟ್ ಮಸಾಲ, ಕಸೂರಿ ಮೇಥಿ, ಉಪ್ಪು ಎಲ್ಲವನ್ನೂ ಹಾಕಿ ಮಿಕ್ಸ್ ಮಾಡಿ. ಅದರಲ್ಲಿ ಪನೀರ್ ಕ್ಯೂಬ್ ಗಳನ್ನು ಅದ್ದಿಸಿ.
ಇನ್ನೊಂದು ಬೌಲ್ ನಲ್ಲಿ ಕಡಲೆಹಿಟ್ಟು, ಅಕ್ಕಿ ಹಿಟ್ಟು, ಅರಿಶಿನ, ಅಚ್ಚಖಾರದ ಪುಡಿ, ಇಂಗು, ಚಾಟ್ ಮಸಾಲ, ಉಪ್ಪು, ನೀರು ಹಾಕಿ ಕಲೆಸಿಕೊಳ್ಳಿ. ಅದಕ್ಕೆ ಒಂದು ಚಿಟಿಕೆಯಷ್ಟು ಬೇಕಿಂಗ್ ಸೋಡಾವನ್ನು ಹಾಕಿ ಮಿಕ್ಸ್ ಮಾಡಿ.
ಈ ಮಿಶ್ರಣದಲ್ಲಿ ಮಸಾಲೆಯಲ್ಲಿ ಪನೀರ್ ಅನ್ನು ಅದ್ದಿಕೊಂಡು ಬಿಸಿ ಬಿಸಿಯಾದ ಎಣ್ಣೆಯಲ್ಲಿ ಕರಿಯಿರಿ. ಪಕೋಡಾ ಗರಿಗರಿಯಾಗಿ ಹೊಂಬಣ್ಣ ಬರುವವರೆಗೂ ಕರಿದರೆ ತಿನ್ನಲು ರುಚಿಯಾಗಿರುತ್ತದೆ.