ಚಳಿಗಾಲ ಮತ್ತು ಚಹಾಕ್ಕೆ ಅವಿನಾಭಾವ ಸಂಬಂಧವಿದೆ. ಭಾರತದಲ್ಲಿ ಚಹಾ ಪ್ರಿಯರಿಗೆ ಕೊರತೆಯಿಲ್ಲ. ಅನೇಕರು ಬೆಳಗ್ಗೆ, ಸಂಜೆ ಹೀಗೆ ದಿನಕ್ಕೆ ಮೂರ್ನಾಲ್ಕು ಬಾರಿಯಾದ್ರೂ ಚಹಾ ಸವಿಯುತ್ತಾರೆ. ಕೆಲವರಂತೂ ಎಷ್ಟು ಬಾರಿ ಕೊಟ್ಟರೂ ಬಿಸಿ ಬಿಸಿ ಚಹಾವನ್ನು ಗುಟುಕರಿಸುತ್ತಾರೆ, ನಿರಾಕರಿಸುವುದಿಲ್ಲ. ಅಂಥವರಲ್ಲಿ ನೀವೂ ಒಬ್ಬರಾಗಿದ್ದರೆ ಎಚ್ಚರಿಕೆಯಿಂದಿರಿ. ಏಕೆಂದರೆ ಹೆಚ್ಚು ಚಹಾ ಕುಡಿಯುವುದರಿಂದ ನಿಮ್ಮ ಆರೋಗ್ಯಕ್ಕೆ ಅಪಾಯ ಉಂಟಾಗುತ್ತದೆ.
ಹಾಗಿದ್ರೆ ದಿನಕ್ಕೆ ಎಷ್ಟು ಚಹಾ ಕುಡಿಯಬೇಕು ಅನ್ನೋದನ್ನು ನೋಡೋಣ. ಚಹಾದಲ್ಲಿ ಕೆಫೀನ್ ಇರುತ್ತದೆ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಆದರೂ ಇದು ಚಹಾದ ಎಲೆಯ ಗುಣಮಟ್ಟವನ್ನು ಅವಲಂಬಿಸಿರುತ್ತದೆ. ಏಕೆಂದರೆ ಕೆಫೀನ್ ಪ್ರಮಾಣವು ಬ್ರ್ಯಾಂಡ್‌ನಿಂದ ಬ್ರ್ಯಾಂಡ್‌ಗೆ ಬದಲಾಗುತ್ತದೆ. ಒಂದು ಕಪ್ ಚಹಾದಲ್ಲಿ ಸುಮಾರು 60 ಮಿಲಿ ಗ್ರಾಂ ಕೆಫೀನ್ ಇರುತ್ತದೆ. ಈ ರೀತಿ ಲೆಕ್ಕಾಚಾರ ಹಾಕಿದ್ರೆ ಒಬ್ಬ ವ್ಯಕ್ತಿ ದಿನಕ್ಕೆ ಹೆಚ್ಚು ಅಂದ್ರೆ 3 ಕಪ್ ಚಹಾ ಕುಡಿಯಬಹುದು. ಅದಕ್ಕಿಂತ ಜಾಸ್ತಿ ಕುಡಿದ್ರೆ ಆರೋಗ್ಯಕ್ಕೆ ಹಾನಿಕರ.
ಕಬ್ಬಿಣದ ಕೊರತೆ: ದಿನಕ್ಕೆ 4 ಕಪ್ ಅಥವಾ ಅದಕ್ಕಿಂತ ಹೆಚ್ಚು ಚಹಾವನ್ನು ಸೇವಿಸಿದರೆ, ಅದರಲ್ಲಿರುವ ಟ್ಯಾನಿನ್ ನಿಮ್ಮ ದೇಹದಲ್ಲಿ ಕಬ್ಬಿಣವನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಸಸ್ಯಾಹಾರಿಗಳು ಹೆಚ್ಚು ಚಹಾವನ್ನು ಸೇವಿಸಿದರೆ, ಅದು ಅವರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ತಲೆಸುತ್ತು: ಚಹಾದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೆಫೀನ್ ಇರುವುದರಿಂದ, ಇದು ಮೆದುಳಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ, ಇದರಿಂದಾಗಿ ತಲೆ ಸುತ್ತುವಿಕೆ ಕೂಡ ಉಂಟಾಗುತ್ತದೆ. ಅದಕ್ಕಾಗಿಯೇ ಹೆಚ್ಚು ಚಹಾ ಸೇವನೆ ಮಾಡುವುದನ್ನು ತಪ್ಪಿಸಬೇಕು.
ಎದೆಯುರಿ: ನೀವು ದಿನಕ್ಕೆ 5 ರಿಂದ 10 ಕಪ್ ಚಹಾವನ್ನು ಸೇವಿಸಿದರೆ, ಅದು ಆಸಿಡ್ ರಿಫ್ಲಕ್ಸ್ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಇದರಿಂದಾಗಿ ಎದೆಯುರಿ, ಎದೆನೋವಿನ ಸಮಸ್ಯೆ ಬರಬಹುದು. ಆದ್ದರಿಂದ ಅತಿಯಾಗಿ ಚಹಾ ಕುಡಿಯುವ ಅಭ್ಯಾಸವನ್ನು ಬಿಟ್ಟುಬಿಡಿ.