ಈ ಬಾರಿಯ ವಿಧಾನಸಭಾ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಬಳಿಕ ಶಾಕ್ ಮೇಲೆ ಶಾಕ್ ಎದುರಾಗುತ್ತಿದ್ದು, ಲಕ್ಷ್ಮಣ ಸವದಿ, ಆರ್. ಶಂಕರ್, ಬಾಬುರಾವ್ ಚಿಂಚನಸೂರ್ ಮೊದಲಾದವರು ರಾಜೀನಾಮೆ ನೀಡಿದ್ದು, ಜಗದೀಶ್ ಶೆಟ್ಟರ್, ನೆಹರು ಓಲೇಕಾರ್ ಮೊದಲಾದವರು ಇದೇ ಹಾದಿಯಲ್ಲಿದ್ದಾರೆ.
ಈ ಶಾಕ್ ನಿಂದ ಬಿಜೆಪಿ ನಾಯಕರು ಹೊರಬರುವ ಮುನ್ನವೇ ಇದೀಗ ಕೊಪ್ಪಳ ಕ್ಷೇತ್ರದ ಸಂಸದ ಸಂಗಣ್ಣ ಕರಡಿ ತಮ್ಮ ಸಂಸತ್ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ. ಕೊಪ್ಪಳ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಅವರು ಅವಕಾಶ ಸಿಗುವುದಿಲ್ಲವೆಂಬುದು ಖಚಿತವಾಗುತ್ತಿದ್ದಂತೆ ಈ ನಿರ್ಧಾರ ಕೈಗೊಳ್ಳಲು ಮುಂದಾಗಿದ್ದಾರೆ ಎನ್ನಲಾಗಿದೆ.
ಹೀಗಾಗಿ ಸಂಗಣ್ಣ ಕರಡಿ ತಮ್ಮ ಆಪ್ತರ ಸಭೆ ಕರೆದಿದ್ದು, ಅವರುಗಳೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಒಂದೊಮ್ಮೆ ಕೊಪ್ಪಳ ಕ್ಷೇತ್ರದ ಟಿಕೆಟ್ ಸಿಗದಿದ್ದರೆ ನವ ದೆಹಲಿಗೆ ತೆರಳಿ ಸಂಸತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಹೇಳಲಾಗಿದೆ.